ಅಥಣಿ (ಬೆಳಗಾವಿ):ಸೋಮವಾರ ಸಂಜೆ ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಕೂಡಲಸಂಗಮ ಕ್ರಾಸ್ ಬಳಿ ಸಂಭವಿಸಿದ ಅಪಘಾತದ ಬಗ್ಗೆ ಡಿಸಿಎಂ ಲಕ್ಷ್ಮಣ್ ಸವದಿ ಅವರ ಪುತ್ರ ಚಿದಾನಂದ ಸವದಿ 'ಈಟಿವಿ ಭಾರತ'ದೊಂದಿಗೆ ಮಾಹಿತಿ ಹಂಚಿಕೊಂಡಿದ್ದಾರೆ.
ಅಪಘಾತವಾದ ಕಾರಿನಲ್ಲಿ ನಾನು ಇರಲಿಲ್ಲ:
ಈ ಕುರಿತು ಈಟಿವಿ ಭಾರತದೊಂದಿಗೆ ಮಾತನಾಡಿದ ಅವರು, ನಿನ್ನೆ ಸಂಜೆ 6 ಗಂಟೆ ಸುಮಾರಿಗೆ ನಾನು ಹಾಗೂ ನನ್ನ ಸ್ನೇಹಿತರು ಎರಡು ವಾಹನಗಳಲ್ಲಿ ಅಂಜನಾದ್ರಿ ಬೆಟ್ಟಕ್ಕೆ ತೆರಳಿದ್ದವು. ಅಲ್ಲಿಂದ ವಾಪಸ್ ಬರುವಾಗ ನಾನು ಸ್ನೇಹಿತನ ಕಾರಿನಲ್ಲಿ ಮುಂದೆ ಬಂದಿದ್ದು, ನನ್ನ ಕಾರು ಹಿಂದೆ ಬರುತ್ತಿತ್ತು. ನಾನಿದ್ದ ಕಾರಿಗೂ ನನ್ನ ಕಾರಿಗೂ ಸುಮಾರು 30 ಕಿ.ಮೀ. ಅಂತರವಿತ್ತು ಎಂದು ಹೇಳಿದ್ದಾರೆ.
ಈ ವೇಳೆ ನನ್ನ ಡ್ರೈವರ್ ಕರೆ ಮಾಡಿ ಹುನಗುಂದ ತಾಲೂಕಿನ ಕೂಡಲಸಂಗಮ ಕ್ರಾಸ್ ಬಳಿ ಬೈಕ್ ಸವಾರ ದಿಢೀರ್ ಅಡ್ಡ ಬಂದಿದ್ದರಿಂದ ಅಪಘಾತ ಸಂಭವಿಸಿರುವುದಾಗಿ ತಿಳಿಸಿದ. ಕೂಡನೇ ನಾನು ಆ್ಯಂಬುಲೆನ್ಸ್ಗೆ ಕರೆ ಮಾಡಿ, ಅವರನ್ನು ಆಸ್ಪತ್ರೆಗೆ ಕಳುಹಿಸಿದೆ. ಬಳಿಕ ನಾನು ನೇರವಾಗಿ ಅಪಘಾತ ನಡೆದ ಸ್ಥಳಕ್ಕೆ ತೆರಳಿದೆ. ಅಲ್ಲಿ ಯಾರೂ ಇರಲಿಲ್ಲ. ಹೀಗಾಗಿ ಆಸ್ಪತ್ರೆಗೆ ಹೋದೆ. ಅಲ್ಲಿ ಆ ವ್ಯಕ್ತಿಯ ಕುಟುಂಬದವರಾಗಲಿ, ಸಂಬಂಧಿಕರಾಗಲಿ ಯಾರೂ ಇರಲಿಲ್ಲ. ಹೀಗಾಗಿ ಅವರನ್ನು ಭೇಟಿಯಾಗಲು ಸಾಧ್ಯವಾಗಿಲ್ಲ. ಚಾಲಕನ ಅಚಾತುರ್ಯದಿಂದ ಘಟನೆ ಸಂಭವಿಸಿದೆ. ಮೃತರ ಕುಟುಂಬಸ್ಥರಿಗೆ ಸಾಂತ್ವನ ಹೇಳುತ್ತೇನೆ ಎಂದರು.