ಬೆಳಗಾವಿ: ಬೆಳಗಾವಿ ಬಿಜೆಪಿಯಲ್ಲಿ ಭಿನ್ನಮತ ಇಲ್ಲ. ಎಲ್ಲ ಒಂದೇ ಮತ. ಅದುವೇ ಬಿಜೆಪಿ ಗೆಲ್ಲಿಸೋದು ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ. ಬಿಜೆಪಿ ಸಭೆಯಲ್ಲಿ ಭಾಗವಹಿಸಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾರಿಗೆ ಏನು ಸೂಚನೆ ಕೊಡಬೇಕು ಅದನ್ನು ಕೊಟ್ಟಿದ್ದೇನೆ. ನಾನು ಭಿನ್ನಮತ ಶಮನಕ್ಕೆ ಬಂದಿಲ್ಲ. ಬೆಳಗಾವಿ ಜಿಲ್ಲೆಯಲ್ಲಿ ಯಾವುದೇ ಭಿನ್ನಮತ ಇಲ್ಲ ಎಂದು ಸ್ಪಷ್ಟನೆ ನೀಡಿದರು.
ರಾಜ್ಯ ಸಚಿವ ಸಂಪುಟ ವಿಸ್ತರಣೆ ಬಗ್ಗೆ ಮುಖ್ಯಮಂತ್ರಿ, ಕೇಂದ್ರ ನಾಯಕರು ತೀರ್ಮಾನ ಮಾಡುತ್ತಾರೆ. ಎರಡು ಕ್ಷೇತ್ರದಲ್ಲಿ ಬಿಜೆಪಿ ದೊಡ್ಡ ಅಂತರದ ಗೆಲುವು ಸಾಧಿಸಲಿದೆ. ಶೈಕ್ಷಣಿಕ ಕ್ಷೇತ್ರದಲ್ಲಿ ಬಿಜೆಪಿ ಆಡಳಿತಾವಧಿಯಲ್ಲಿ ಸಾಕಷ್ಟು ಅಭಿವೃದ್ಧಿ ಮಾಡಲಾಗಿದೆ. ಭಾರತದಲ್ಲಿ ಪ್ರಥಮ ಭಾರಿಗೆ ಸ್ಥಳೀಯ ಭಾಷೆಯಲ್ಲಿ ಇಂಜಿನಿಯರಿಂಗ್, ಮೆಡಿಕಲ್ ಶಿಕ್ಷಣ ಪ್ರಾರಂಭ ಮಾಡಿದ್ದೇವೆ. ಪ್ರಧಾನಿಯೂ ಸ್ಥಳೀಯ ಭಾಷೆಗಳು ಆತ್ಮ ಎಂದು ಹೇಳಿದ್ದಾರೆ ಎಂದು ಹೇಳಿದರು. ಶಿಕ್ಷಣ ಕ್ಷೇತ್ರಕ್ಕೆ ಈ ವರ್ಷದ ಬಜೆಟ್ ನಲ್ಲಿ ಹೆಚ್ಚಿನ ಅನುದಾನವನ್ನು ನೀಡಲಾಗಿದೆ. ಕೌಶಲ್ಯ ಅಭಿವೃದ್ಧಿ ಕೇಂದ್ರದಿಂದ ರಾಜ್ಯ ಸರ್ಕಾರಕ್ಕೆ ಹೆಚ್ಚಿನ ಅನುದಾನ ನೀಡಲಾಗಿದೆ ಎಂದು ಪ್ರಹ್ಲಾದ್ ಜೋಶಿ ಇದೇ ವೇಳೆ ಹೇಳಿದರು.
ಚುನಾವಣೇ ಗೆಲ್ಲಲು ಎಲ್ಲ ಶಾಸಕರು, ಸಂಸದರ ಜತೆಗೆ ಚರ್ಚೆ ಮಾಡಲಾಗಿದ್ದು, ಈ ಬಗ್ಗೆ ಯೋಜನೆ ರೂಪಿಸಲಾಗಿದೆ. ಎಲ್ಲರೂ ಅವರವರ ಕೆಲಸ ಪ್ರಾರಂಭಿಸಲಿದ್ದಾರೆ. ಪ್ರತೀ ವಿಧಾನಸಭಾ ಕ್ಷೇತ್ರದಲ್ಲಿ ಮತದಾರರು, ಪಕ್ಷದ ಮುಖಂಡರ ನೇತೃತ್ವದಲ್ಲಿ ಸಭೆ ನಡೆಯಲಿದೆ. ಶಾಸಕರಿಗೆ ಹೆಚ್ಚಿನ ಜವಾಬ್ದಾರಿ ನೀಡಲಾಗಿದೆ ಎಂದು ಹೇಳಿದರು.
ಪರಿಹಾರಕ್ಕೆ ಕ್ರಮ: ಧಾರವಾಡದಲ್ಲಿ ಸಂಭವಿಸಿದ ಅಪಘಾತದ ಕುರಿತು ಪ್ರತಿಕ್ರಿಯಿಸಿದ ಅವರು, ಬೆಳಗ್ಗೆ ಮದುವೆಗೆ ಹೊರಟ್ಟಿದ್ದ ಕ್ರೂಸರ್ ಅಪಘಾತವಾಗಿ 9 ಜನ ಮೃತಪಟ್ಟಿದ್ದಾರೆ. ಏಳರಿಂದ ಎಂಟು ಜನ ತೀವ್ರವಾಗಿ ಗಾಯಗೊಡಿದ್ದಾರೆ. ಮೃತರ ಆತ್ಮಕ್ಕೆ ನಾನು ಶಾಂತಿಕೋರುತ್ತೇನೆ. ಮೃತರ ಕುಟುಂಬಕ್ಕೆ ಅಗತ್ಯ ನೆರವು ನೀಡುವಂತೆ ಡಿಸಿ, ಎಸ್‌ಪಿ ಅವರಿಗೆ ಸೂಚನೆ ಕೊಟ್ಟಿದ್ದೇನೆ. ಸಿಎಂ ಜೊತೆಗೂ ಮಾತನಾಡಲು ಪ್ರಯತ್ನಪಟ್ಟಿದ್ದೇನೆ. ಅವರು ಪ್ರವಾಸದಲ್ಲಿರುವ ಕಾರಣಕ್ಕೆ ಸಾಧ್ಯವಾಗಲಿಲ್ಲ. ಅವರನ್ನು ಮತ್ತೊಮ್ಮೆ ಸಂಪರ್ಕಿಸಿ ಮೃತರ ಕುಟುಂಬಕ್ಕೆ ಪರಿಹಾರ ಕೊಡಿಸುವುದಾಗಿ ಹೇಳಿದರು.