ಬೆಳಗಾವಿ: ರೈತರ ಸಮಸ್ಯೆಗಳಿಗೆ ಸ್ಪಂದಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಉತ್ತಮ ಕೆಲಸ ಮಾಡುತ್ತಿವೆ ಎಂದು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿ ಹೇಳಿದರು.
ಭೂ ಸುಧಾರಣಾ ಕಾಯ್ದೆ ರದ್ದುಪಡಿಸುವಂತೆ ಒತ್ತಾಯಿಸಿ ಮೂರು ದಿನಗಳಿಂದ ರೈತ ಮುಖಂಡರು ಅಥಣಿಯಲ್ಲಿ ಡಿಸಿಎಂ ಲಕ್ಷ್ಮಣ ಸವದಿ, ನಿನ್ನೆ ಜಿಲ್ಲಾ ಉಸ್ತುವಾರಿ ಸಚಿವ ರಮೇಶ್ ಜಾರಕಿಹೊಳಿ ಮನೆಗೆ ಮುತ್ತಿಗೆ ಹಾಕಿದ್ದರು.
ಸುರೇಶ್ ಅಂಗಡಿ ಅವರ ನಿವಾಸದ ಬಳಿ ಪೊಲೀಸರ ನಿಯೋಜನೆ ಇಂದು ಸುರೇಶ್ ಅಂಗಡಿ ಅವರ ಮನೆಗೆ ಮುತ್ತಿಗೆ ಹಾಕುವುದಾಗಿ ರೈತರ ಎಚ್ಚರಿಕೆ ಹಿನ್ನೆಲೆ ಮನೆಯ ಸುತ್ತಮುತ್ತ ಹಾಗೂ ಕಚೇರಿ ಬಳಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸ್ ಭದ್ರತೆ ನಿಯೋಜಿಸಲಾಗಿದೆ. ಈ ಕುರಿತು ಮಾತನಾಡಿದ ಅವರು, ರೈತರ ಹಿತ ಕಾಯಲು ಕೇಂದ್ರ ಸರ್ಕಾರ ಕಿಸಾಸ್ ರೈಲು ಸೇರಿದಂತೆ ಅನೇಕ ಯೋಜನೆಗಳನ್ನು ತಂದಿದೆ. ರೈತ ಪರವಾಗಿಯೇ ಕೆಲಸ ಮಾಡಲಾಗುತ್ತಿದೆ ಎಂದರು.
ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿ ರೈತರು ಅನವಶ್ಯಕವಾಗಿ ಪ್ರತಿಭಟನೆಗೆ ಇಳಿಯದೇ ಆತ್ಮ ನಿರ್ಭರ ಯೋಜನೆಯಡಿ ಕೆಲಸ ಮಾಡಬೇಕಿದೆ. ರೈತರ ಸಮಸ್ಯೆಗಳು ಏನೇ ಆಗಿದ್ದರೂ ಬಗೆಹರಿಸಲು ಎರಡೂ ಸರ್ಕಾರಗಳು ಬದ್ಧವಾಗಿವೆ ಎಂದರು.
ರಾಜ್ಯದ ಮುಖ್ಯಮಂತ್ರಿ ಅವರು ಅರ್ಥ ಮಾಡಿಕೊಂಡು ಭೂ ಸುಧಾರಣಾ ಕಾಯ್ದೆ ಜಾರಿಗೆ ತಂದಿದ್ದಾರೆ. ಕಾಯ್ದೆ ಕುರಿತು ಪ್ರತಿಪಕ್ಷದ ನಾಯಕರು, ತಜ್ಞರ ಸಲಹೆ ಮೇರೆಗೆ ಸಚಿವ ಸಂಪುಟದ ಎಲ್ಲಾ ಸಚಿವರ ಸಮ್ಮುಖದಲ್ಲಿ ನಿರ್ಣಯ ತೆಗೆದುಕೊಂಡಿರುತ್ತಾರೆ. ಅದರಲ್ಲಿ ರೈತರಿಗೆ ಮಾರಕವಾಗುವಂತಹ ಏನಾದರೂ ಸಮಸ್ಯೆಗಳಿದ್ದರೆ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ, ಬಗೆಹರಿಸಲಾಗುವುದು ಎಂದು ಭರವಸೆ ನೀಡಿದರು.