ಚಿಕ್ಕೋಡಿ :ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಪತ್ತೆ ಹಚ್ಚಿ ಅದನ್ನು ನಿಷ್ಕ್ರಿಯಗೊಳಿಸುವ ಮೂಲಕ ಹಲವಾರು ಅಮಾಯಕರ ಸಾವು ನೋವುಗಳನ್ನು ತಡೆದ ಕೀರ್ತಿ ನಮ್ಮ ರಾಜ್ಯದ ಪೊಲೀಸ್ ಇಲಾಖೆಗೆ ಸಲ್ಲುತ್ತದೆ. ಪೊಲೀಸ್ ಇಲಾಖೆಯ ಸಾಮರ್ಥ್ಯದ ಬಗ್ಗೆ ನನಗೆ ಹೆಮ್ಮೆ ಅನಿಸುತ್ತಿದೆ ಎಂದು ಡಿಸಿಎಂ ಲಕ್ಷ್ಮಣ ಸವದಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕರ್ನಾಟಕ ಶಾಂತಿಪ್ರಿಯರ ನಾಡು. ಭಯೋತ್ಪಾದನೆ ಅಥವಾ ದುಷ್ಕೃತ್ಯ ನಡೆಸುವ ಕೆಲ ವಿಚ್ಛಿದ್ರಕಾರಿ ಶಕ್ತಿಗಳ ಆಟ ನಮ್ಮ ಸರ್ಕಾರ ಮತ್ತು ಸಮರ್ಥ ಪೊಲೀಸರ ಎದುರು ನಡೆಯುವುದಿಲ್ಲ ಎಂಬುದನ್ನು ಈ ಘಟನೆ ಮತ್ತೊಮ್ಮೆ ಸಾಬೀತುಪಡಿಸಿದೆ. ಇತ್ತೀಚೆಗೆ ಮಂಗಳೂರಿನಲ್ಲಿ ಪ್ರತಿಭಟನೆಯ ನೆಪದಲ್ಲಿ ಶಾಂತಿ ಕದಡುವ ಮತ್ತು ದಂಗೆ ಹಿಂಸಾಕೃತ್ಯ ನಡೆಸುವ ಪ್ರಯತ್ನ ನಡೆದಾಗಲೂ ಇದೇ ಪೊಲೀಸರು ತಮ್ಮ ಮೇಲಿನ ದಾಳಿ ಲೆಕ್ಕಿಸದೆ ಪರಿಸ್ಥಿತಿ ಹತೋಟಿಯಲ್ಲಿಟ್ಟು ಸಾರ್ವಜನಿಕರಿಂದ ಮೆಚ್ಚುಗೆಗೆ ಪಾತ್ರರಾಗಿದ್ದರು ಎಂಬುದನ್ನು ಈ ಸಂದರ್ಭದಲ್ಲಿ ಸ್ಮರಿಸುತ್ತೇನೆ.