ಬೆಳಗಾವಿ: ಬಿಜೆಪಿ ಕಾರ್ಯಕರ್ತರನ್ನು ಅವರ ಪಕ್ಷ ಅವರಿಗೆ ಬೇಕಾದಂತೆ ಬಳಸಿಕೊಳ್ಳುತ್ತಿರುವುದಾಗಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿದ್ದಾರೆ. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬೆಳಗಾವಿ ಗುತ್ತಿಗೆದಾರ ಸಂತೋಷ್ ಪಾಟೀಲ ಸಚಿವ ಈಶ್ವರಪ್ಪನವರ ಮೇಲೆ ಡೆತ್ ನೋಟ್ ಮೆಸೇಜ್ ಕಳುಹಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈಶ್ವರಪ್ಪ ರಾಜೀನಾಮೆ ನೀಡೊವರೆಗೂ ಕಾಂಗ್ರೆಸ್ ಹೋರಾಟ ನಡೆಸುತ್ತದೆ. ಪ್ರತಿ ಜಿಲ್ಲೆಯಲ್ಲಿಯೂ ಕಾಂಗ್ರೆಸ್ ಹೋರಾಟ ಮಾಡುತ್ತದೆ. ಅಲ್ಲದೆ ಜಿಲ್ಲಾಮಟ್ಟ, ತಾಲೂಕಾ ಮಟ್ಟದಲ್ಲೂ ಹೋರಾಟ ಮಾಡುತ್ತೇವೆ ಎಂದು ಹೇಳಿದ್ದಾರೆ.
ಬಿಜೆಪಿಯವರಿಗೆ ಹೊಡೆದಾಡಲು, ಬಡಿದಾಡಲು ಮಾತ್ರ ಕಾರ್ಯಕರ್ತರು ಬೇಕು: ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಬೇರೆಯವರ ವಿಚಾರದಲ್ಲಿ ಎಫ್ ಐಆರ್ ಆಗೋ ಮೊದಲೇ ಬಿಜೆಪಿಯವರು ರಾಜೀನಾಮೆ ಪಡಿಯುತ್ತಾರೆ. ಆದರೆ, ಸಚಿವ ಈಶ್ವರಪ್ಪ ವಿಚಾರದಲ್ಲಿ ಎಫ್ಐಆರ್ ಆಗಿದೆ.ಜೊತೆಗೆ ಕುಟುಂಬಸ್ಥರು ಆರೋಪ ಮಾಡಿದ್ದಾರೆ. ಈಶ್ವರಪ್ಪ ಅವರನ್ನು ಬಂಧಿಸಲು ಇಷ್ಟು ಸಾಕಲ್ಲವೇ ಎಂದು ಇದೇ ವೇಳೆ ಪ್ರಶ್ನಿಸಿದ್ದಾರೆ.
ಬಿಜೆಪಿಯವರದ್ದು ದೊಡ್ಡ ಪಕ್ಷ. ಅವರು ತಮ್ಮನ್ನು ತಾವು ಪ್ರಾಮಾಣಿಕ ಪಕ್ಷ ಎಂದು ಹೇಳಿಕೊಳ್ಳುತ್ತಾರೆ. ಸಂತೋಷ್ ಆತ್ಮಹತ್ಯೆ ಪ್ರಕರಣದಲ್ಲಿ ಎಷ್ಟು ಪ್ರಾಮಾಣಿಕತೆ ತೋರುತ್ತಾರೆ ಎಂಬುದನ್ನು ಕಾದು ನೋಡೋಣ. ಡಿ ಕೆ ರವಿ, ಹರ್ಷ ವಿಚಾರದಲ್ಲಿ ಬಿಜೆಪಿಯವರು ಏನು ಮಾಡಿದ್ದರು ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಬಿಜೆಪಿಯವರು ಕಾರ್ಯಕರ್ತರನ್ನು ತಮಗೆ ಬೇಕಾದಂತೆ ಬಳಸಿಕೊಳ್ಳುತ್ತಾರೆ. ಇವರಿಗೆ ಹೊಡೆದಾಡಲು, ಬಡಿದಾಡಲು ಮಾತ್ರ ಕಾರ್ಯಕರ್ತರು ಬೇಕು. ಸಂತೋಷ್ ಪ್ರಕರಣದಲ್ಲೂ ಹಾಗೇ ಆಗಿದೆ ಎಂದು ವಾಗ್ದಾಳಿ ನಡೆಸಿದರು.
ಈಶ್ವರಪ್ಪರನ್ನು ಸಂಪುಟದಿಂದ ವಜಾ ಅಷ್ಟೇ ಅಲ್ಲ, ತಕ್ಷಣವೇ ಬಂಧಿಸಬೇಕು : ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಆಗ್ರಹ :
ಕೆ.ಎಸ್. ಈಶ್ವರಪ್ಪರನ್ನು ಸಂಪುಟದಿಂದ ವಜಾ ಅಷ್ಟೇ ಅಲ್ಲ, ತಕ್ಷಣವೇ ಬಂಧಿಸಬೇಕು ಎಂದು ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಸರ್ಕಾರವನ್ನು ಆಗ್ರಹಿಸಿದ್ದಾರೆ. ಗುತ್ತಿಗೆದಾರ ಸಂತೋಷ್ ಅಂತ್ಯಕ್ರಿಯೆ ಬಳಿಕ ಮಾತನಾಡಿದ ಅವರು, ಕಳೆದ ಎರಡು ದಿನಗಳಿಂದ ಸಂತೋಷ್ ತಾಯಿ, ಪತ್ನಿ ಸೇರಿದಂತೆ ಕುಟುಂಬಸ್ಥರು ಊಟ ನಿದ್ರೆ ಇಲ್ಲದೇ ಸಂಕಷ್ಟದಲ್ಲಿದ್ದರು. ಹೀಗಾಗಿ ಸಮಾಧಾನದಿಂದ ಸಂತೋಷ್ ಅಂತ್ಯಕ್ರಿಯೆ ನಡೆಯಲಿ ಎಂದು ಸುಮ್ಮನಾದೆವು ಎಂದು ಹೇಳಿದ್ದಾರೆ.
ಈಶ್ವರಪ್ಪರನ್ನು ಸಂಪುಟದಿಂದ ವಜಾ ಅಷ್ಟೇ ಅಲ್ಲ, ತಕ್ಷಣವೇ ಬಂಧಿಸಬೇಕು : ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಆಗ್ರಹ ನಾವು ಒಂದೇ ಒಂದು ಕರೆ ಕೊಟ್ಟಿದ್ದರೆ 10 ಸಾವಿರ ಜನ ಸೇರುತ್ತಿದ್ದರು. ಸಂತೋಷ್ ಪಾಟೀಲ್ ಬಿಜೆಪಿ ಕಾರ್ಯಕರ್ತ. ಯಡಿಯೂರಪ್ಪ ಹಾಗೂ ಮೋದಿಜೀ ಅಪ್ಪಟ ಅಭಿಮಾನಿ ಆಗಿದ್ದವನು. ಸೌಜನ್ಯಕ್ಕೂ, ಮಾನವೀಯತೆ ದೃಷ್ಟಿಯಿಂದ ಯಾವೊಬ್ಬ ಬಿಜೆಪಿ ಮುಖಂಡರು ಇಲ್ಲಿ ಬಂದು ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲಿಲ್ಲ. ಇಷ್ಟೊಂದು ಕಠೋರ ಆಗಿ ಬಿಟ್ರಾ. 24 ಗಂಟೆ ರಾಮನ ಭಜನೆ ಮಾಡೋರು, ದೇವರ ಪೂಜಿಸುವ ಇವರ ಹೃದಯ ಇಷ್ಟೊಂದು ಕಠೋರವಾಯ್ತಾ? ಎಂದು ಪ್ರಶ್ನಿಸಿದ್ದಾರೆ.
ಸಂತೋಷ್ ಕುಟುಂಬಸ್ಥರಿಗೆ 4 ಕೋಟಿ ಕಾಮಗಾರಿ ಬಿಲ್ ತಕ್ಷಣ ರಿಲೀಸ್ ಮಾಡಬೇಕು ಹಾಗೂ 1 ಕೋಟಿ ರೂಪಾಯಿ ಪರಿಹಾರ ನೀಡಬೇಕು. ಜೊತೆಗೆ ಸಂತೋಷ್ ಪತ್ನಿಗೆ ಸರ್ಕಾರಿ ನೌಕರಿ ನೀಡಬೇಕು ಎಂದು ಸಿಎಂಗೆ ಮನವಿ ಮಾಡುತ್ತೇನೆ ಎಂದು ಹೇಳಿದ್ದಾರೆ. ಸಂತೋಷ್ ಮೊಬೈಲ್ ನಲ್ಲಿ ಎಲ್ಲಾ ಸಾಕ್ಷಿಗಳು ಸಿಕ್ಕಿವೆ. ಮೂವರ ವಿರುದ್ಧ ಕೇಸ್ ದಾಖಲಾಗಿದೆ. ಆದರೂ ಅವರನ್ನು ಇನ್ನೂ ಬಂಧಿಸಿಲ್ಲ ಎಂದು ಹೆಬ್ಬಾಳ್ಕರ್ ದೂರಿದ್ದಾರೆ.
ಪ್ರಕರಣ ಸಂಬಂಧಪಟ್ಟಂತೆ ಈಶ್ವರಪ್ಪನವರಿಗೆ ಮಂತ್ರಿಗಿರಿಯಿಂದ ವಜಾ ಅಷ್ಟೇಅಲ್ಲ, ಅವರನ್ನು ಬಂಧಿಸಬೇಕು, ಶಿಕ್ಷೆ ಆಗಬೇಕು. ಈ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕು. ಬಿಜೆಪಿಯವರಿಗೆ ಪಕ್ಷ ಮುಖ್ಯ ಅಲ್ಲ, ರಾಜಕಾರಣ ಮುಖ್ಯ. ಈ ಹೊಲಸು ರಾಜಕಾರಣಕ್ಕೆ ಅದೆಷ್ಟು ಜನರ ಬಲಿ ಪಡೆಯುತ್ತಾರೋ ಗೊತ್ತಿಲ್ಲ. ನಿಮ್ಮ ಹೊಲಸು ರಾಜಕಾರಣ ಬದಿಗಿಟ್ಟು, ಅವರ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡುವಂತೆ ಇದೇ ವೇಳೆ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಆಗ್ರಹಿಸಿದ್ದಾರೆ.
ಓದಿ :ಗುತ್ತಿಗೆದಾರನ ಆತ್ಮಹತ್ಯೆ ಕೇಸ್.. ಪ್ರಾಥಮಿಕ ತನಿಖಾ ವರದಿ ಬಳಿಕವೇ ಮುಂದಿನ ಕ್ರಮ ಎಂದ ಸಿಎಂ