ಬೆಳಗಾವಿ: ಧರ್ಮಕ್ಕೆ ಸಂಕಷ್ಟ ಬಂದಾಗ ಪ್ರತಿಯೊಬ್ಬ ತಲ್ವಾರ್ ಹಿಡಿದು ಹೊರ ಬರಬೇಕು ಎಂದು ಹೈದರಾಬಾದ್‌ನ ಭಾಗ್ಯನಗರ ಬಿಜೆಪಿ ಶಾಸಕ ರಾಜಾಸಿಂಗ್ ಠಾಕೂರ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಬೆಳಗಾವಿ ತಾಲೂಕಿನ ಗಣೇಶ್ ಭಾಗ್‌ನಲ್ಲಿ ಹಿಂದೂಪರ ಕಾರ್ಯಕರ್ತರ ಸ್ನೇಹಮಿಲನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ನಾನು ನಿಮಗೆ ಒಂದು ಕೆಲಸ ಒಪ್ಪಿಸಲು ಬಯಸುತ್ತೇನೆ. ದೇಶ, ಧರ್ಮದ ಸಲುವಾಗಿ ಸಂಘಟಿತರಾಗಿ ಕೆಲಸ ಮಾಡಬೇಕು. ದೇಶದಲ್ಲಿ ಮೋದಿ ಸರ್ಕಾರ ಇದೆ. ಕರ್ನಾಟಕದಲ್ಲೂ ಬಿಜೆಪಿ ಸರ್ಕಾರ ಇದೆ. ಆದ್ರೆ, ಧರ್ಮಕ್ಕೆ ಸಂಕಟ ಬಂದಾಗ ಸರ್ಕಾರ ಮುಂದೆ ಬರಲ್ಲ. ನೀವೇ ಮುಂದೆ ಬರಬೇಕು. ಧರ್ಮಕ್ಕೆ ಸಂಕಷ್ಟ ಬಂದಾಗ ನೀವೇ ಕೈಯಲ್ಲಿ ತಲ್ವಾರ್ ಹಿಡಿದು ಹೊರ ಬರಬೇಕು.
ನಮ್ಮ ಹಿಂದೂಗಳನ್ನು ಮತಾಂತರ ಮಾಡುವ ದೊಡ್ಡ ಷಡ್ಯಂತ್ರ ನಡೆಯುತ್ತಿದೆ. ಪ್ರತಿ ಗ್ರಾಮದಲ್ಲೊಂದು ಸೇನೆ ನಿರ್ಮಿಸುವುದಾಗಿ ಹಿಂದೂ ಕಾರ್ಯಕರ್ತರು ಸಂಕಲ್ಪ ಮಾಡಬೇಕು. ಮತಾಂತರ ತಡೆಯಲು ಈ ಸೇನೆ ಕಾರ್ಯಪ್ರವೃತ್ತರಾಗಬೇಕು. ಎಲ್ಲೆಡೆ ಈಗ ಹಣ ನೀಡಿ ಮತಾಂತರ ಮಾಡಲಾಗುತ್ತಿದೆ ಎಂದು ಆರೋಪಿಸಿದರು.
ಕಾಂಗ್ರೆಸ್ಸಿಗರು ದೇಶದ್ರೋಹಿಗಳು :ದೇಶದಿಂದ ತೊಲಗುವಾಗ ಬ್ರಿಟಿಷರು ಈ ಕಾಂಗ್ರೆಸ್ ಪಕ್ಷದವರನ್ನು ಬಿಟ್ಟು ಹೋಗಿದ್ದಾರೆ. ಕಾಂಗ್ರೆಸ್ಸಿಗರು ದೇಶದ್ರೋಹಿಗಳು. ಹಿಂದೂ ಹಿಂದೂಗಳ ಮಧ್ಯೆ, ಭಾಷೆಗಳ ಮಧ್ಯೆ ಜಗಳ ಹಚ್ಚಲು ಷಡ್ಯಂತ್ರ ನಡೆಯುತ್ತಿದೆ. ಬೆಳಗಾವಿ ಪುಣ್ಯ, ವೀರಭೂಮಿಯ ನೆಲ. ಕಿತ್ತೂರು ರಾಣಿ ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ ಬ್ರಿಟಿಷರ ವಿರುದ್ಧ ಹೋರಾಡಿದರು. ಈಗಲೂ ಕೆಲವರು ನಮ್ಮ ನಮ್ಮ ಮಧ್ಯೆ ಜಗಳ ಹಚ್ಚಲು ಯತ್ನಿಸುತ್ತಿದ್ದಾರೆ. ಕನ್ನಡಿಗ ಮರಾಠಿಗರ ಮಧ್ಯೆ ಜಗಳ ಹಚ್ಚಲು ಷಡ್ಯಂತ್ರ ನಡೆಯುತ್ತಿದೆ. ಇದನ್ನು ಪ್ರತಿಯೊಬ್ಬರೂ ನೆನಪಿನಲ್ಲಿಟ್ಟುಕೊಳ್ಳಬೇಕು ಎಂದರು.