ಬೆಳಗಾವಿ: 2020 ಹಾಗೂ 2021 ಅಕ್ಟೋಬರ್ ಅಂತ್ಯದವರೆಗೆ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿದ್ದ 206 ಕಳ್ಳತನ ಹಾಗೂ ದರೋಡೆ ಪ್ರಕರಣಗಳನ್ನು ಬೆಳಗಾವಿ ಪೊಲೀಸರು ಭೇದಿಸಿದ್ದು, 8.58 ಕೋಟಿ ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ತಿಳಿಸಿದರು.
ಜಪ್ತಿ ಮಾಡಲಾದ ವಸ್ತುಗಳನ್ನು ವಾರಸುದಾರರಿಗೆ ಮರಳಿಸಲಾಗುತ್ತಿದೆ. 2020ರಲ್ಲಿ 1.05 ಕೋಟಿ ಮೌಲ್ಯದ 2 ಕೆ.ಜಿ 336 ಗ್ರಾಂ. ಚಿನ್ನ, 7.74 ಲಕ್ಷ ರೂ. ಮೌಲ್ಯದ 17 ಕೆ.ಜಿ. 881 ಗ್ರಾಂ. ಬೆಳ್ಳಿ, 2021ರಲ್ಲಿ 27.25 ಲಕ್ಷ ಮೌಲ್ಯದ 702.24 ಗ್ರಾಂ ಚಿನ್ನಾಭರಣ ಮತ್ತು 52,900 ಮೌಲ್ಯದ 1 ಕೆ.ಜಿ. 275 ಗ್ರಾಂ. ಬೆಳ್ಳಿ ಆಭರಣಗಳನ್ನು ವಶಕ್ಕೆ ಪಡೆಯಲಾಗಿದೆ. 47.35 ಲಕ್ಷ ರೂ. ಮೌಲ್ಯದ 168 ದ್ವಿಚಕ್ರ ವಾಹನಗಳು, 22 ಕಾರುಗಳು ಹಾಗೂ 32 ಮೊಬೈಲ್ ಫೋನ್‌ಗಳ ಕಳ್ಳತನ ಪ್ರಕರಣಗಳನ್ನು ಪತ್ತೆ ಹಚ್ಚಲಾಗಿದೆ ಎಂದು ತಿಳಿಸಿದರು.
2020ರಲ್ಲಿ 1.10 ಕೋಟಿ ಹಾಗೂ 2021ರಲ್ಲಿ 10,06,850 ಕಳವಾಗಿತ್ತು. ಅದನ್ನೂ ಕಳ್ಳರಿಂದ ಜಪ್ತಿ ಮಾಡಲಾಗಿದೆ. ಜಾನುವಾರು, ಅರಿಶಿನ, ಧಾನ್ಯ, ಟೈಯರ್‌ಗಳು ಮತ್ತಿತರೆ ವಸ್ತುಗಳನ್ನು ಕೂಡ ಕಳವು ಮಾಡಿರುವುದು ವರದಿಯಾಗಿದೆ. ಅವುಗಳಲ್ಲಿ 1.18 ಕೋಟಿ ರೂ. ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಅವುಗಳನ್ನು ನ್ಯಾಯಾಲಯದಿಂದ ಅನುಮತಿ ಪಡೆದು ವಾರಸುದಾರರಿಗೆ ಹಿಂತಿರುಗಿಸಲು ಕ್ರಮ ವಹಿಸಲಾಗಿದೆ. ಸಿಬ್ಬಂದಿ ಯಶಸ್ವಿಯಾಗಿ ಕಾರ್ಯಾಚರಣೆ ನಡೆಸಿ ಪ್ರಕರಣಗಳನ್ನು ಭೇದಿಸಿದ್ದಾರೆ ಎಂದು ಹೇಳಿದರು.