ಕರ್ನಾಟಕ

karnataka

ETV Bharat / city

ಜಾರಕಿಹೊಳಿ‌ ಸಹೋದರರ ಕನಸಿಗೆ ಬಿಜೆಪಿ ಹೈಕಮಾಂಡ್ ಎಳ್ಳು ನೀರು: ಪಕ್ಷೇತರ ಅಭ್ಯರ್ಥಿ ಆಗ್ತಾರಾ 'ಲಖನ್'..! - ಲಖನ್ ಜಾರಕಿಹೊಳಿ‌ಗೆ ಬಿಜೆಪಿ ಟಿಕೆಟ್​

ವಿಧಾನ ಪರಿಷತ್​ ಚುನಾವಣೆಗೆ (Karnataka legislative council election 2021) ಹಾಲಿ ಸದಸ್ಯ ಮಹಾಂತೇಶ ಕವಟಗಿಮಠ ಅವರಿಗೆ ಬಿಜೆಪಿ ಮೂರನೇ ಬಾರಿಗೆ ಟಿಕೆಟ್ ನೀಡಿದೆ. ಬಿಜೆಪಿ ಎರಡನೇ ಅಭ್ಯರ್ಥಿ ಆಗಿ ಲಖನ್ ಜಾರಕಿಹೊಳಿ‌ಯನ್ನು ಕಣಕ್ಕಿಳಿಸಲು ಪ್ರಯತ್ನಿಸಿದ್ದ ಜಾರಕಿಹೊಳಿ‌ ಸಹೋದರರ ಕನಸ್ಸಿಗೆ ಬಿಜೆಪಿ ಹೈಕಮಾಂಡ್ ಎಳ್ಳುನೀರು ಬಿಟ್ಟಿದೆ. ಸದ್ಯ ಲಖನ್​ ಪಕ್ಷೇತರ ಅಭ್ಯರ್ಥಿಯಾಗಿ ಕಣ್ಣಕ್ಕಿಳಿಯುತ್ತಾರಾ ಎಂಬ ಗೊಂದಲ ಜಿಲ್ಲಾ ರಾಜಕೀಯದಲ್ಲಿ ಮೂಡಿದೆ.

belgaum-lakhan-jarkiholi-contest-as-a-independent-candidate-in-council-election
ಜಾರಕಿಹೊಳಿ‌ ಸಹೋದರರು

By

Published : Nov 20, 2021, 2:18 PM IST

ಬೆಳಗಾವಿ:ವಿಧಾನ ಪರಿಷತ್ ಚುನಾವಣೆಯಲ್ಲಿ (karnataka legislative council election 2021) ಎರಡು ಸ್ಥಾನಗಳ ಪೈಕಿ ಒಂದೇ ಸ್ಥಾನಕ್ಕೆ ಸ್ಪರ್ಧಿಸಲು ಬಿಜೆಪಿ ನಿರ್ಧರಿಸಿದೆ. ಹಾಲಿ ಸದಸ್ಯ ಮಹಾಂತೇಶ ಕವಟಗಿಮಠ ಅವರಿಗೆ ಬಿಜೆಪಿ ಮೂರನೇ ಬಾರಿಗೆ ಟಿಕೆಟ್ ನೀಡಿದೆ. ಬಿಜೆಪಿ ಎರಡನೇ ಅಭ್ಯರ್ಥಿ ಆಗಿ ಲಖನ್ ಜಾರಕಿಹೊಳಿ‌ಯನ್ನು ಕಣಕ್ಕಿಳಿಸಲು ಪ್ರಯತ್ನಿಸಿದ್ದ ಜಾರಕಿಹೊಳಿ‌ ಸಹೋದರರ ಕನಸಿಗೆ ಬಿಜೆಪಿ ಹೈಕಮಾಂಡ್ ಎಳ್ಳುನೀರು ಬಿಟ್ಟಿದೆ. ಲಖನ್ ಜಾರಕಿಹೊಳಿ‌ (lakhan jarkiholi) ನಡೆಯೂ ಇದೀಗ ಜಿಲ್ಲಾ ರಾಜಕಾರಣದಲ್ಲಿನ ಕುತೂಹಲಕ್ಕೆ ಕಾರಣವಾಗಿದೆ.

ಜಾರಕಿಹೊಳಿ‌ ಸಹೋದರರ ಬೇಡಿಕೆ ಏನಾಗಿತ್ತು?:ಗಡಿ ಜಿಲ್ಲೆ ಬೆಳಗಾವಿ ರಾಜ್ಯದ ಎರಡನೇ ಅತಿದೊಡ್ಡ ಜಿಲ್ಲೆ. ಸ್ಥಳೀಯ ಸಂಸ್ಥೆಗಳಿಂದ ಇಲ್ಲಿಂದ ಇಬ್ಬರು ಪರಿಷತ್ ಪ್ರವೇಶಿಸುತ್ತಾರೆ. ಹಾಲಿ ಸದಸ್ಯ ಮಹಾಂತೇಶ ಕವಟಗಿಮಠ ಬಿಜೆಪಿಯ ಮೊದಲ ಅಭ್ಯರ್ಥಿ ಆಗಿದ್ದಾರೆ. ಎರಡನೇ ಅಭ್ಯರ್ಥಿ ಆಗಿ ಲಖನ್ ಜಾರಕಿಹೊಳಿ‌ಗೆ ಟಿಕೆಟ್ ನೀಡುವಂತೆ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ‌ ಬಿಜೆಪಿ ನಾಯಕರಲ್ಲಿ ಬಹಿರಂಗವಾಗಿ ಕೇಳಿದ್ದರು.

ಮತ್ತೊಂದೆಡೆ ಮಾಜಿ ಸಚಿವ ರಮೇಶ್ ಜಾರಕಿಹೊಳಿ‌ ಕೂಡ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹಾಗೂ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮೂಲಕವೂ ಟಿಕೆಟ್​ಗೆ ಲಾಬಿ ಮಾಡಿದ್ದರು. ಆದರೀಗ ಗೊಂದಲ ಉಂಟಾಗಬಾರದು ಎಂಬ ಕಾರಣಕ್ಕೆ ಒಂದೇ ಸ್ಥಾನಕ್ಕೆ ಸ್ಪರ್ಧಿಸಲು ಬಿಜೆಪಿ ನಿರ್ಧರಿಸಿದೆ. ಇದರಿಂದ ಜಾರಕಿಹೊಳಿ‌ ಸಹೋದರರ ಬೇಡಿಕೆಗೆ ಬಿಜೆಪಿ ನಾಯಕರು ಸ್ಪಂದಿಸಿಲ್ಲ‌. ಹೀಗಾಗಿ ಜಾರಕಿಹೊಳಿ‌ ಸಹೋದರರ ನಡೆ ಏನಾಗಿರಲಿದೆ ಎಂಬುವುದೇ ಸದ್ಯದ ಕುತೂಹಲ.

ಪಕ್ಷೇತರ ಅಭ್ಯರ್ಥಿ ಆಗ್ತಾರಾ ಲಖನ್.. :ಚುನಾವಣೆ ಘೋಷಣೆ ಆಗುತ್ತಿದ್ದಂತೆ ಜಾರಕಿಹೊಳಿ‌ ಸಹೋದರರಾದ ರಮೇಶ್ ಜಾರಕಿಹೊಳಿ‌ ಹಾಗೂ ಬಾಲಚಂದ್ರ ಜಾರಕಿಹೊಳಿ‌ ಅಖಾಡಕ್ಕೆ ಇಳಿದಿದ್ದಾರೆ. ಮಾಜಿ ಸಚಿವ ರಮೇಶ್ ಕೂಡ ಎಲ್ಲ ತಾಲೂಕಿಗೆ ಭೇಟಿ ನೀಡಿ ಪಂಚಾಯತ ಸದಸ್ಯರ ಜೊತೆಗೆ ಸಭೆ ನಡೆಸುತ್ತಿದ್ದಾರೆ. ಒಂದು ಮತ ಬಿಜೆಪಿಗೆ ಮತ್ತೊಂದು ಮತ ನಾವು ಹೇಳಿದವರಿಗೆ ನೀಡುವಂತೆ ಕೋರುತ್ತಿದ್ದಾರೆ ಎನ್ನಲಾಗುತ್ತಿದೆ.

ಬಿಜೆಪಿ ಟಿಕೆಟ್ ಮಿಸ್ ಆಗಿರುವ ಕಾರಣ ಲಖನ್ ಅವರನ್ನು ಪಕ್ಷೇತರ ಅಭ್ಯರ್ಥಿ ಆಗಿ ಕಣಕ್ಕಿಳಿಸಲು ಜಾರಕಿಹೊಳಿ‌ ಸಹೋದರರು ನಿರ್ಧರಿಸಿದ್ದಾರೆ. ಲಖನ್ ಕೂಡ ಪಕ್ಷೇತರ ಅಭ್ಯರ್ಥಿ ಆಗಿ ಕಣಕ್ಕಿಳಿಯಲು ಒಲವು ತೋರಿದ್ದಾರೆ. ಈ ಸಲ ಮೇಲ್ಮನೆಗೆ ಸಹೋದರರ ಲಖನ್ ಅವರನ್ನು ಕಳುಹಿಸಲು ಜಾರಕಿಹೊಳಿ‌ ಸಹೋದರರು ತಂತ್ರ ಹೆಣೆದಿದ್ದಾರೆ. ಇದಕ್ಕಾಗಿ ಬಿಜೆಪಿ ಜೊತೆಗೆ ಕಾಂಗ್ರೆಸ್, ಎಂಇಎಸ್ ನಾಯಕರನ್ನು ರಮೇಶ್ ಭೇಟಿ ಆಗುತ್ತಿದ್ದಾರೆ.

ಲಖನ್ ಸ್ಪರ್ಧೆಯಿಂದ ಯಾರಿಗೆ ನಷ್ಟ..?: ರಾಜ್ಯದ ರಾಜಕಾರಣಕ್ಕೂ ಹಾಗೂ ಗಡಿ ಜಿಲ್ಲೆ ಬೆಳಗಾವಿ ರಾಜಕಾರಣಕ್ಕೂ ತುಸು ಭಿನ್ನವಾಗಿದೆ. ಇಲ್ಲಿ ಪಕ್ಷಕ್ಕಿಂತ ವ್ಯಕ್ತಿಗತ ಪ್ರಭಾವವೇ ಹೆಚ್ಚಿದೆ. ಜಿಲ್ಲೆಯ ಹಿಡಿತ ಸಾಧಿಸಲು ಕತ್ತಿ, ಜಾರಕಿಹೊಳಿ‌, ಸವದಿ ಹಾಗೂ ಜೊಲ್ಲೆ ಕುಟುಂಬದ ಮಧ್ಯೆ ಆಗಾಗ ಹಗ್ಗಜಗ್ಗಾಟ ನಡೆಯುತ್ತಲೇ ಇರುತ್ತದೆ. ಇದೀಗ ಲಖನ್ ಪಕ್ಷೇತರವಾಗಿ ಸ್ಪರ್ಧಿಸಿದರೆ ಕಾಂಗ್ರೆಸ್ ಗಿಂತ ಬಿಜೆಪಿಗೆ ಹೆಚ್ಚು ನಷ್ಟವಾಗಲಿದೆ. ಜಾರಕಿಹೊಳಿ‌ ಸಹೋದರರು ಪ್ರತಿನಿಧಿಸುವ ಗೋಕಾಕ್​ ಹಾಗೂ ಅರಭಾವಿ ಕ್ಷೇತ್ರದಲ್ಲಿ ಲಖನ್ ಮೊದಲ ಪ್ರಾಶಸ್ತ್ಯ ಮತ ಪಡೆದರೆ ಬಿಜೆಪಿ ಅಭ್ಯರ್ಥಿಗೆ ತುಸು ಕಷ್ಟವಾಗಲಿದೆ.

ಇನ್ನು ಬೆಳಗಾವಿ ಗ್ರಾಮೀಣ, ಯಮಕನಮರಡಿ, ಚಿಕ್ಕೋಡಿ - ಸದಲಗಾ, ಖಾನಾಪುರ, ಬೈಲಹೊಂಗಲ ಕ್ಷೇತ್ರದಲ್ಲಿ ಕಾಂಗ್ರೆಸ್ ಶಾಸಕರಿದ್ದಾರೆ. ಇಲ್ಲಿ ಕೈ ಅಭ್ಯರ್ಥಿ ಅಭ್ಯರ್ಥಿ ಚನ್ನರಾಜ್ ಹಟ್ಟಿಹೊಳಿ ಪ್ರಥಮ ಪ್ರಾಶಸ್ತ್ಯ ಮತ ಪಡೆದಿದ್ದೇ ಆದಲ್ಲಿ ಬಿಜೆಪಿ ಅಭ್ಯರ್ಥಿಗೆ ತುಸು ಕಷ್ಟವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಆದರೆ, ರಮೇಶ್ ಜಾರಕಿಹೊಳಿ‌ ಕಾಂಗ್ರೆಸ್ ಅಭ್ಯರ್ಥಿಯನ್ನು ಸೋಲಿಸುವುದೇ ನನ್ನ ಗುರಿ ಎಂದು ಗುಡುಗಿದ್ದಾರೆ. ಹೀಗಾಗಿ ತ್ರಿಕೋನ ಸ್ಪರ್ಧೆಗೆ ಪರಿಷತ್ ಚುನಾವಣೆ ಸಾಕ್ಷಿ ಆಗಲಿದ್ದು, ವಿಜಯದ ಮಾಲೆ ಯಾರಿಗೆ ಎಂಬುದನ್ನು ಕಾದುನೋಡಬೇಕಿದೆ.

ವಿವೇಕರಾವ್ ಪಾಟೀಲ ನಡೆ ನಿಗೂಢ:ಕಾಂಗ್ರೆಸ್ ಟಿಕೆಟ್ ಕೇಳಿರುವ ಹಾಲಿ ಪಕ್ಷೇತರ ಸದಸ್ಯ ವಿವೇಕರಾವ್ ಪಾಟೀಲ್ ನಡೆಯೂ ನಿಗೂಢವಾಗಿದೆ. ಕಾಂಗ್ರೆಸ್ ಕೂಡ ಒಂದೇ ಸ್ಥಾನಕ್ಕೆ ಸ್ಪರ್ಧಿಸಲು ನಿರ್ಧರಿಸಿದ್ದು ಹೆಬ್ಬಾಳ್ಕರ್ ಸಹೋದರ ಚನ್ನರಾಜ್​ಗೆ ಟಿಕೆಟ್ ಸಿಗುವುದು ಬಹುತೇಕ ಖಚಿತವಾಗಿದೆ. ಹೀಗಾಗಿ ವಿವೇಕರಾವ್ ಈ ಸಲ ಪಕ್ಷೇತರರಾಗಿ ಸ್ಪರ್ಧಿಸಬೇಕಾಗಿರುವುದು ಅನಿವಾರ್ಯವಾಗಿದೆ‌. ಆದರೆ ಇನ್ನೂ ಈ ಬಗ್ಗೆ ವಿವೇಕರಾವ್ ಸ್ಪಷ್ಟಪಡಿಸಿಲ್ಲ. ಮತ್ತೊಂದೆಡೆ ರಮೇಶ್ ಕೂಡ ವಿವೇಕರಾವ್ ಪಾಟೀಲರನ್ನು ಭೇಟಿ ಮಾಡಿ ಮಾತುಕತೆ ನಡೆಸಿರುವುದು ಕುತೂಹಲ ಮೂಡಿಸಿದೆ.

ABOUT THE AUTHOR

...view details