ಬೆಳಗಾವಿ: ಕಳೆದ ಎರಡು ದಿನಗಳಿಂದ ಜಿಲ್ಲೆಯ ಎಲ್ಲ ಕೃಷಿ ಪರಿಕರ ಮಾರಾಟ ಮಳಿಗೆಗಳ ತಪಾಸಣೆ ಕೈಗೊಂಡು ನೂನ್ಯತೆ ಹೊಂದಿದ ಮಾರಾಟ ಮಳಿಗೆಗಳಿಗೆ ನೋಟಿಸ್ ನೀಡಲಾಗಿದೆ.
ಬೆಳಗಾವಿ: ಕೃಷಿ ಪರಿಕರ ಮಾರಾಟ ಮಳಿಗೆಗಳ ತಪಾಸಣೆ, 112 ಮಳಿಗೆಗಳಿಗೆ ಶೋಕಾಸ್ ನೋಟಿಸ್ ಮುಂಗಾರು ಹಂಗಾಮಿಗೆ ಗುಣಮಟ್ಟದ ಬಿತ್ತನೆ ಬೀಜ, ರಸಗೊಬ್ಬರ ಹಾಗೂ ಕೀಟನಾಶಕಗಳು ದೊರಕಿಸಿಕೊಡುವ ನಿಟ್ಟಿನಲ್ಲಿ ಕೃಷಿ ಇಲಾಖೆ 65 ಅಧಿಕಾರಿಗಳನ್ನು ಒಳಗೊಂಡ 19 ತಂಡ ರಚಿಸಲಾಗಿದೆ. ಕಳೆದ ಎರಡು ದಿನಗಳಿಂದ ಜಿಲ್ಲೆಯ ಎಲ್ಲ ಕೃಷಿ ಪರಿಕರ ಮಾರಾಟ ಮಳಿಗೆಗಳ ತಪಾಸಣೆ ಕೈಗೊಂಡು ನೂನ್ಯತೆ ಹೊಂದಿದ 112 ಮಾರಾಟ ಮಳಿಗೆಗಳಿಗೆ ನೋಟಿಸ್ ನೀಡಲಾಗಿದೆ.
ಜಿಲ್ಲೆಯ ಒಟ್ಟು 336 ಮಾರಾಟ ಮಳಿಗೆಗಳ ತಪಾಸಣೆ ನಡೆಸಿ ಸೂಕ್ತ ದಾಖಲಾತಿಗಳಿಲ್ಲದ ಹಾಗೂ ಗುಣಮಟ್ಟದ ಬಗ್ಗೆ ಸಂಶಯಾತ್ಮಕ ಪರಿಕರ ಹೊಂದಿದ 76 ಮಾರಾಟಗಾರರಿಗೆ ಮಾರಾಟ ತಡೆ ನೋಟಿಸ್ ನೀಡಲಾಗಿದೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಜಿಲಾನಿ ಮೊಖಾಶಿ ತಿಳಿಸಿದ್ದಾರೆ.
ಸಂಶಯವಿದ್ದ ಒಂದು ರಸಗೊಬ್ಬರ ಮಾದರಿ ಪರೀಕ್ಷೆಗೆ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಪ್ರಯೋಗಾಲಯದಿಂದ ಕಡಿಮೆ ಗುಣಮಟ್ಟದ್ದೆಂದು ವರದಿ ಬಂದ ಹಿನ್ನೆಲೆಯಲ್ಲಿ 62,520 ಮೌಲ್ಯದ ರಸಗೊಬ್ಬರ ಮುಟ್ಟುಗೋಲು ಹಾಕಲಾಗಿದೆ. ಚಿಕ್ಕೋಡಿ ತಾಲೂಕಿನಲ್ಲಿ ಗುಣಮಟ್ಟದ ಬಗ್ಗೆ ಸಂಶಯ ವಿರುವ 180 ಲೀಟರ್ ಜೈವಿಕ ಉತ್ಪನ್ನ ವಿತರಣೆಗೆ ಮಾರಾಟ ತಡೆ ನೋಟಿಸ್ ಜಾರಿಮಾಡಲಾಗಿದೆ. ಕಿತ್ತೂರು ತಾಲೂಕಿನಲ್ಲಿ ಪರವಾನಗಿ ಇಲ್ಲದ ಅನಧಿಕೃತ ಮಾರಾಟ ಮಳಿಗೆಯಲ್ಲಿ 80 ಸಾವಿರ ಮೌಲ್ಯದ 740 ಕೆ.ಜಿ ಬಿತ್ತನೆ ಬೀಜ ಹಾಗು 100 ಲೀಟರ್ ಕಳೆನಾಶಕವನ್ನು ಮುಟ್ಟುಗೋಲು ಹಾಕಿ ಮಾರಾಟ ಮಳಿಗೆ ಸೀಜ್ ಮಾಡಲಾಗಿದೆ.
ಸವದತ್ತಿ ತಾಲೂಕಿನಲ್ಲಿ ಗುಣಮಟ್ಟದ ಬಗ್ಗೆ ಸಂಶಯವಿರುವ ರೂ 25 ಸಾವಿರ ಜೈವಿಕ ಕೀಟನಾಶಕ ಹಾಗೂ ಪರವಾನಗಿಯಲ್ಲಿ ನಮೂದಾಗದೇ ಇರುವ 50 ಸಾವಿರ ರೂ, ಮೌಲ್ಯದ ನಾಶಕ ಜಪ್ತಿ ಮಾಡಲಾಗಿದೆ. ರೈತ ಬಾಂಧವರಿಗೆ ಕೃಷಿ ಪರಿಕರಗಳ ಗುಣಮಟ್ಟದ ಬಗ್ಗೆ ಸಂಶಯ ಬಂದಲ್ಲಿ ಕೃಷಿ ಇಲಾಖೆಯನ್ನು ಸಂಪರ್ಕಿಸಬೇಕು ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಜಿಲಾನಿ ಮೊಖಾಶಿ ಮನವಿ ಮಾಡಿದ್ದಾರೆ.