ಅಥಣಿ (ಬೆಳಗಾವಿ): ಕೊರೊನಾ ಪಾಸಿಟಿವ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆ, ತಾಲೂಕು ಸರ್ಕಾರಿ ಆಸ್ಪತ್ರೆಗೆ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಭೇಟಿ ನೀಡಿ ಪರಿಶೀಲಿಸಿದರು.
ಅಥಣಿ ತಾಲೂಕು ಆಸ್ಪತ್ರೆಯಲ್ಲಿ ಕೋವಿಡ್ ಪರೀಕ್ಷಾ ಕೇಂದ್ರ ಆರಂಭಿಸಲಾಗುವುದು: ಜಿಲ್ಲಾಧಿಕಾರಿ ಹಿರೇಮಠ - Athani Taluk Hospital
ಅಥಣಿಯಿಂದ ಜಿಲ್ಲಾಸ್ಪತ್ರೆ ದೂರ ಇರುವುದರಿಂದ ಕೊರೊನಾ ಸೋಂಕಿತರಿಗೆ ತುಂಬಾ ತೊಂದರೆ ಆಗುತ್ತಿದೆ. ಹೀಗಾಗಿ ಅಥಣಿ ತಾಲೂಕು ಆಸ್ಪತ್ರೆಯಲ್ಲಿಯೇ ಕೋವಿಡ್ ಪರೀಕ್ಷಾ ಕೇಂದ್ರವನ್ನ ಆರಂಭಿಸಲಾಗುವುದು ಎಂದು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ತಿಳಿಸಿದ್ದಾರೆ.
ಬಳಿಕ ಆಸ್ಪತ್ರೆಯ ವೈದ್ಯರು ಹಾಗೂ ತಾಲೂಕು ಮಟ್ಟದ ಅಧಿಕಾರಿಗಳ ಸಭೆ ನಡೆಸಿ, ಅಧಿಕಾರಿಗಳು ತಮ್ಮ ಕರ್ತವ್ಯವನ್ನ ಅಚ್ಚುಕಟ್ಟಾಗಿ ನಿರ್ವಹಿಸಬೇಕು ಎಂದು ಸೂಚಿಸಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಾಲೂಕಿನಲ್ಲಿ ಇಲ್ಲಿಯವರೆಗೆ 45ಕ್ಕೂ ಅಧಿಕ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಅಲ್ಲದೆ, 5 ಜನರು ಸಾವನ್ನಪ್ಪಿದ್ದಾರೆ. ಖಾಸಗಿ ವೈದ್ಯರು ರೋಗಿಗಳಿಗೆ ಚಿಕಿತ್ಸೆ ನೀಡಿದ ಮಾಹಿತಿಯನ್ನ ಸರ್ಕಾರಕ್ಕೆ ನೀಡುತ್ತಿಲ್ಲ. ಈ ಬಗ್ಗೆಯೂ ಸಭೆ ನಡೆಸಲಾಗಿದ್ದು, ಕಟ್ಟುನಿಟ್ಟಿನ ಕ್ರಮಕ್ಕೆ ಸೂಚಿಸಲಾಗಿದೆ ಎಂದರು.
ಆಸ್ಪತ್ರೆಯಲ್ಲಿ ಕರ್ತವ್ಯನಿರತ ಗುತ್ತಿಗೆ ಆಧಾರದ ಸಿಬ್ಬಂದಿ ಮತ್ತು ವೈದ್ಯರು ಸಮಯಕ್ಕೆ ಸರಿಯಾಗಿ ತಮ್ಮ ಕರ್ತವ್ಯಕ್ಕೆ ಹಾಜರಾಗಬೇಕು. ಅಥಣಿಯಿಂದ ಜಿಲ್ಲಾಸ್ಪತ್ರೆಯು ದೂರ ಇರುವುದರಿಂದ ಕೊರೊನಾ ಸೋಂಕಿತರಿಗೆ ತುಂಬಾ ತೊಂದರೆ ಆಗುತ್ತಿದೆ. ಅಥಣಿ ತಾಲೂಕು ಆಸ್ಪತ್ರೆಯಲ್ಲಿ ಎಲ್ಲಾ ವ್ಯವಸ್ಥೆ ಇರುವುದರಿಂದ ಇಲ್ಲೇ ಕೋವಿಡ್ ಪರೀಕ್ಷಾ ಕೇಂದ್ರವನ್ನ ಆರಂಭಿಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.