ಬೆಳಗಾವಿ :ಕೋವಿಡ್ ಲಸಿಕೆಯಿಂದ ಯಾವುದೇ ಅಡ್ಡಪರಿಣಾಮವಿಲ್ಲ ಎಂಬುದು ಖಚಿತವಾಗಿರುವುದರಿಂದ ಲಸಿಕೆ ಪಡೆಯಲು ಜನರು ಮುಂದೆ ಬರುತ್ತಿದ್ದಾರೆ. ಆದ್ದರಿಂದ ಈ ಸಂದರ್ಭ ಬಳಸಿ ಜಿಲ್ಲೆಯಲ್ಲಿ ಎಲ್ಲರಿಗೂ ಲಸಿಕೆ ನೀಡಲು ಅಗತ್ಯ ವ್ಯವಸ್ಥೆ ಕಲ್ಪಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಕೆ ಹರೀಶ್ ಕುಮಾರ್ ಅಧಿಕಾರಿಗಳಿಗೆ ಸೂಚಿಸಿದರು.
ಕೋವಿಡ್ ನಿಯಂತ್ರಣ ಮತ್ತು ಲಸಿಕಾಕರಣ ಕುರಿತು ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ತಹಶೀಲ್ದಾರ್‌ರ ಜತೆಗಿನ ವಿಡಿಯೋ ಸಂವಾದದಲ್ಲಿ ಮಾತನಾಡಿದರು. ಕೋವಿಡ್ ಲಸಿಕೆ ಹಾಕಿಸಿಕೊಳ್ಳಲು ಅನುಕೂಲವಾಗುವಂತೆ ಗ್ರಾಮೀಣ ಪ್ರದೇಶಗಳ ಜನರಿಗೆ ಸಾರಿಗೆ ವ್ಯವಸ್ಥೆ, ಮತ್ತಿತರ ಮೂಲಸೌಕರ್ಯ ಒದಗಿಸುವ ಮೂಲಕ ಲಸಿಕಾಕರಣ ಪ್ರಮಾಣ ಹೆಚ್ಚಿಸಲು ಎಲ್ಲ ರೀತಿಯ ಕ್ರಮಕೈಗೊಳ್ಳಬೇಕು. ಸೋಂಕಿತರ ಸಂಪರ್ಕಿತರನ್ನು ಗುರುತಿಸಬೇಕು, ಪರೀಕ್ಷಿಸಬೇಕು, ಚಿಕಿತ್ಸೆ ಒದಗಿಸಬೇಕು. ಇದರ ಜೊತೆಗೆ ಉಳಿದವರಿಗೆ ಲಸಿಕೆ ನೀಡಲು ಪ್ರಯತ್ನಿಸಬೇಕು ಎಂದು ತಿಳಿಸಿದರು.