ಬೆಳಗಾವಿ: ಬೆಳಗಾವಿ ಪಟ್ಟಣದ ನಾಗರತ್ನಾ ರಾಮಗೌಡ ಎಂಬವರು ಹೆಚ್‌ಐವಿ ರೋಗವನ್ನು ಮೆಟ್ಟಿ ನಿಂತು 25 ವರ್ಷಗಳಿಂದ ಎಲ್ಲರಂತೆ ಆರೋಗ್ಯವಾಗಿದ್ದು, ಹೆಚ್ಐವಿ-ಏಡ್ಸ್ ಬಗ್ಗೆ ಜನರಲ್ಲಿ ಅರಿವು ಮೂಡಿಸುತ್ತಿದ್ದಾರೆ. ಇವರ ಈ ಧೈರ್ಯ, ಆತ್ಮವಿಶ್ವಾಸ ಹಾಗು ಅದಮ್ಯ ಛಲದ ಬದುಕನ್ನು ಮೆಚ್ಚಿ ಹತ್ತಾರು ಸಂಘಟನೆಗಳು ಹಲವು ಪ್ರಶಸ್ತಿಗಳನ್ನು ನೀಡಿ ಗೌರವಿಸಿವೆ.
ನಾಗರತ್ನಾ ಅವರಿಗೆ 1997ರಲ್ಲಿ ಸುನೀಲ ರಾಮಗೌಡ ಎಂಬವರೊಂದಿಗೆ ವಿವಾಹವಾಗಿತ್ತು. ಆಗಿನ್ನೂ ಅವರಿಗೆ 17 ವರ್ಷ ಪ್ರಾಯ. ಮದುವೆಯಾದ 5 ತಿಂಗಳ ಬಳಿಕ ವೈದ್ಯರೊಬ್ಬನ್ನು ಭೇಟಿ ಮಾಡಿದಾಗ ಹೆಚ್‌ಐವಿ ಪಾಸಿವಿಟ್ ಇರುವುದು ಗೊತ್ತಾಗಿದೆ. ವೈದ್ಯರು ಕೇವಲ 3 ತಿಂಗಳು ಬದುಕುವ ಬಗ್ಗೆ ಹೇಳಿದ್ದರಂತೆ. ಅದೇ ವೇಳೆಗೆ ನಾಗರತ್ನಾ ಗರ್ಭಿಣಿಯೂ ಆಗಿದ್ದರು.
ಇಂಥ ಸಂದರ್ಭದಲ್ಲಿ ಕೆಲವರಂತೂ ಗರ್ಭಪಾತ ಮಾಡಿಸಿಕೊಳ್ಳುವಂತೆ ಸಲಹೆ ನೀಡಿದ್ದರಂತೆ. ಪತಿಯಿಂದ ನಾಗರತ್ನಾ ಅವರಿಗೆ ಹೆಚ್ಐವಿ ಸೋಂಕು ತಗುಲಿದ್ದು, ಇದರಿಂದ ಇವರು ಭಾರಿ ಆಘಾತವನ್ನೇ ಅನುಭವಿಸಿದರು. ವೈದ್ಯರು ಹೇಳಿದ ವಿಚಾರ ತಿಳಿದ ಹಲವು ದಿನಗಳ ಕಾಲ ಮನೆಯಿಂದ ಹೊರಬಂದಿರಲಿಲ್ಲ. ನಮಗಿದ್ದ ರೋಗದ ಬಗ್ಗೆ ಇಬ್ಬರೂ ಕುಟುಂಬದವರಿಗಾಗಲಿ, ಬೇರೆಯವರಿಗಾಗಲಿ ಹೇಳಿಕೊಂಡಿರಲಿಲ್ಲ. ಆದರೆ, ಕೆಲದಿನಗಳ ನಂತರ ಎಲ್ಲರಿಗೂ ವಿಚಾರ ಗೊತ್ತಾಗುತ್ತದೆ. ಈ ಸಂದರ್ಭದಲ್ಲಂತಲೂ ಮತ್ತಷ್ಟು ತೊಂದರೆ ಅನುಭವಿಸಬೇಕಾಯಿತು ಎಂದರು.