ಬೆಳಗಾವಿ: ಕಳೆದ ಮೂರು ತಿಂಗಳ ಹಿಂದಷ್ಟೇ ಕುಟುಂಬಸ್ಥರ ವಿರೋಧದ ನಡುವೆಯೂ ಪ್ರೀತಿಸಿ ಅಂತರ್ಜಾತಿ ಮದುವೆ ಮಾಡಿಕೊಂಡಿದ್ದ ಯುವಕ ತನ್ನ ಹೆಂಡತಿಯನ್ನು ಕತ್ತುಹಿಸುಕಿ ಕೊಲೆ ಮಾಡಿ ಪರಾರಿಯಾಗಿದ್ದ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಶಹಾಪೂರ ಪೊಲೀಸರು ಬಂಧಿಸಿದ್ದಾರೆ.
ಜಾತಿ ಮರೆತು ಪ್ರೀತಿಸಿ ಮದುವೆಯಾಗಿದ್ದ ಹೆಂಡತಿಯನ್ನು ಕೊಲೆಗೈದಿದ್ದ ಪಾಪಿ ಅಂದರ್ ನಗರದ ಬಸವನಗಲ್ಲಿಯ ನಿವಾಸಿ ಜ್ಯೋತಿ ಯಲ್ಲಾರಿ (19)ಮೃತ ದುರ್ದೈವಿ. ಬೆಳಗಾವಿ ತಾಲೂಕಿನ ಮುಚ್ಚಂಡಿ ಗ್ರಾಮದ ಲಕ್ಷ್ಮಿಕಾಂತ್ ಯಲ್ಲಾರಿಯನ್ನು ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ.
ಪ್ರಕರಣದ ಹಿನ್ನೆಲೆ:
ತಾಲೂಕಿನ ಮುಚ್ಛಂಡಿ ಗ್ರಾಮದ ನಿವಾಸಿ, ಕೊಲೆ ಆರೋಪಿ ಲಕ್ಷ್ಮಿಕಾಂತ್ ಯಲ್ಲಾರಿ ಗಾರೆ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ. ಬಸವನಗರದ ನಿವಾಸಿಯಾಗಿದ್ದ ಜ್ಯೋತಿ ತನ್ನ ತಾಯಿಯ ಆಸರೆಯಲ್ಲಿ ಬೆಳೆಯುತ್ತಿದ್ದಳು. ಕಳೆದೆರಡು ವರ್ಷಗಳ ಹಿಂದೆ ಯುವತಿಯ ಮನೆಯ ಸಮೀಪದ ಖಾಸಗಿ ಆಸ್ಪತ್ರೆಯ ಕಟ್ಟಡ ಕಾಮಗಾರಿಗೆ ಬರುತ್ತಿದ್ದ ಆರೋಪಿ ಲಕ್ಷ್ಮಿಕಾಂತ್ ಯಲ್ಲಾರಿ ಜತೆಗೆ ಜ್ಯೋತಿಗೆ ಪ್ರೀತಿ ಮೊಳಕೆಯೊಡೆದಿತ್ತು.
ಇಬ್ಬರದ್ದೂ ಜಾತಿ ಬೇರೆ ಬೇರೆಯಾದ್ರೂ ಎರಡು ವರ್ಷಗಳ ಕಾಲ ಪ್ರೀತಿಸಿ ಓಡಾಡಿಕೊಂಡಿದ್ದರು. ಕಳೆದ ಮೂರು ತಿಂಗಳ ಹಿಂದಷ್ಟೇ ಬೆಳಗಾವಿಯ ಸಬ್‌ರಿಜಿಸ್ಟ್ರರ್ ಆಫೀಸ್ನಲ್ಲಿ ಮದುವೆಯಾಗಿದ್ದಾರೆ. ಮದುವೆಯಾಗಿದ್ದನ್ನು ಕೇಳಿದ ಎರಡೂ ಕುಟುಂಬಸ್ಥರು ಸೇರಿ ಮತ್ತೊಮ್ಮೆ ಸರಳವಾಗಿ ಮದುವೆ ಮಾಡಿಕೊಟ್ಟಿದ್ದರು.
ಮದುವೆಯಾದ ಬಳಿಕ ಗಂಡನ ಮನೆಯಲ್ಲಿದ್ದ ಯುವತಿಗೆ ಲಕ್ಷ್ಮಿಕಾಂತ್ ಕುಟುಂಬಸ್ಥರು ಪ್ರತಿನಿತ್ಯ ಕಿರುಕುಳ ಕೊಡುತ್ತಿದ್ದರಂತೆ. ನಿರಂತರ ಜಗಳದಿಂದ ಬೇಸತ್ತು ಹೋಗಿದ್ದ ಯುವತಿ ಕಳೆದ ಆರು ದಿನಗಳ ಹಿಂದಷ್ಟೇ ಬೆಳಗಾವಿಯ ಶಹಾಪುರದಲ್ಲಿರುವ ಆಳವಣ್ ಗಲ್ಲಿಯಲ್ಲಿ ಗಂಡನೊಂದಿಗೆ ಬಾಡಿಗೆ ಮನೆಯೊಂದರಲ್ಲಿ ವಾಸಿಸುತ್ತಿದ್ದಳು.
ಇದನ್ನೂ ಓದಿ: ಜಾತಿ ಮೀರಿ 3 ತಿಂಗಳ ಹಿಂದೆ ಲವ್ ಮ್ಯಾರೇಜ್.. ಪತ್ನಿಯನ್ನೇ ಕೊಲೆಗೈದನಾ ಪತಿ!?
ಕುಡಿತದ ದಾಸನಾಗಿದ್ದ ಲಕ್ಷ್ಮೀಕಾಂತ್ ಕೆಲಸಕ್ಕೆ ಹೋಗದೇ ನಿತ್ಯವೂ ಕುಡಿದು ಮನೆಯಲ್ಲೇ ಮಲಗುತ್ತಿದ್ದನಂತೆ. ಒಂದೆರೆಡು ದಿನ ನೋಡಿದ ಹೆಂಡತಿ ಗಂಡನಿಗೆ ಕೆಲಸಕ್ಕೆ ಹೋಗು ಅಂತ ಒತ್ತಾಯಿಸಿದ್ದಾಳೆ. ಇದೇ ವಿಚಾರಕ್ಕೆ ಶುಕ್ರವಾರ ಬೆಳಗ್ಗೆ ಜಗಳ ಪ್ರಾರಂಭವಾಗಿದೆ. ಇದರಿಂದ ಆಕ್ರೋಶಗೊಂಡ ಲಕ್ಷ್ಮೀಕಾಂತ್ ಮನೆಗೆ ಮದ್ಯ ತಂದು ಕುಡಿದಿದ್ದಾನೆ. ಇದಾದ ಬಳಿಕ ಹೆಂಡತಿ ಜತೆಗೆ ಜಗಳವಾಡಿ ಆಕೆಯ ಕತ್ತು ಹಿಸುಕಿ ಕೊಲೆ ಮಾಡಿ ಅಲ್ಲಿಂದ ಪರಾರಿಯಾಗಿದ್ದ.
ಇನ್ನು, ಗಂಡ-ಹೆಂಡತಿ ಮೊಬೈಲ್ ಸ್ವಿಚ್ ಆಫ್ ಬಂದ ಹಿನ್ನೆಲೆಯಲ್ಲಿ ಲಕ್ಷ್ಮಿಕಾಂತ್ ಸಹೋದರ ಕೊಲೆಯಾದ ಯುವತಿ ತಾಯಿಗೆ ಕರೆ ಮಾಡಿ ಇಬ್ಬರ ಜಗಳವಾಡ್ತಿದ್ದ ವಿಚಾರ ತಿಳಿಸಿದ್ದಾನೆ. ತಕ್ಷಣ ತಾಯಿ ಮನೆಗೆ ಬಂದು ನೋಡಿದಾಗ ಬಾಗಿಲು ತೆರದಿತ್ತು. ಆಕೆ ಮಲಗಿದ ಸ್ಥಿತಿಯಲ್ಲಿ ಶವವಾಗಿ ಬಿದ್ದಿದ್ದಳು. ಕೂಡಲೇ ಶಹಾಪುರ ಪೊಲೀಸರಿಗೆ ಮಾಹಿತಿ ರವಾನಿಸಿದ್ದಾರೆ.
ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿ ಪೋಸ್ಟ್ ಮಾರ್ಟಂ ಮಾಡಿ ಶನಿವಾರ ಸಂಜೆ ವೇಳೆ ಶವವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಿದ್ದರು. ಈ ವೇಳೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಪತ್ನಿ ಕೊಲೆ ಮಾಡಿ ಪರಾರಿ ಆಗಿದ್ದ ಪಾಪಿ ಗಂಡನಿಗೆ ಗಲ್ಲು ಶಿಕ್ಷೆ ನೀಡುವಂತೆ ಯುವತಿಯ ಕುಟುಂಬಸ್ಥರು ಒತ್ತಾಯಿಸಿದ್ದಾರೆ.