ಬೆಳಗಾವಿ: ಮೂರು ದಿನಗಳ ಹಿಂದೆಯಷ್ಟೇ ನಡೆದ ಕಟ್ಟಡ ಕಾರ್ಮಿಕನ ಕೊಲೆ ಪ್ರಕರಣದ ಹಂತಕರನ್ನು ಪೊಲೀಸರು ಖೆಡ್ಡಾಕ್ಕೆ ಕೆಡವಿದ್ದಾರೆ. ಪ್ರಿಯಕರನ ಜೊತೆಗೂಡಿ ಪತ್ನಿಯೇ ತನ್ನ ಪತಿಯ ಕೊಲೆಗೈದಿರುವುದು ತನಿಖೆಯಲ್ಲಿ ಬಯಲಾಗಿದೆ.
ಎರಡೇ ದಿನಗಳಲ್ಲಿ ಹಂತಕರನ್ನು ಬಂಧಿಸುವಲ್ಲಿ ಬೆಳಗಾವಿ ಪೊಲೀಸರು ಯಶಸ್ವಿಯಾಗಿದ್ದಾರೆ. ಧಾರವಾಡ ತಾಲೂಕಿನ ಬೋಗೂರ ನಿವಾಸಿ ಬಸವರಾಜ ಹರಿಜನ (20) ಹಾಗೂ ಶ್ರೀದೇವಿ ಮಾದಿಗರ (30) ಕಿತ್ತೂರು ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಏನಿದು ಪ್ರಕರಣ?
ಬೈಲಹೊಂಗಲ ತಾಲೂಕಿನ ಮರೀಕಟ್ಟಿ ಗ್ರಾಮದ ರಮೇಶ್ ಮಾದಿಗರ (36) ಕಟ್ಟಡ ಕಾರ್ಮಿಕನಾಗಿದ್ದನು. ಜ. 12ರಂದು ಕೆಲಸಕ್ಕೆ ಹೋಗಿ ಬರುವುದಾಗಿ ಮನೆಯಲ್ಲಿ ತಿಳಿಸಿ ಕಟ್ಟಡ ನಿರ್ಮಾಣ ಕೆಲಸಕ್ಕಾಗಿ ಹಿರೇಬಾಗೇವಾಡಿಗೆ ತೆರಳಿದ್ದನು. ಆದ್ರೆ ಬಳಿಕ ಜ. 13 ರಂದು ಕಿತ್ತೂರು ತಾಲೂಕಿನ ಬಚ್ಚನಕೇರಿ ಕ್ರಾಸ್ ಬಳಿ ರಮೇಶ ಶವವಾಗಿ ಪತ್ತೆಯಾಗಿದ್ದ. ಪ್ರಕರಣ ಗಂಭೀರವಾಗಿ ಪರಿಗಣಿಸಿದ ಜಿಲ್ಲಾ ಪೊಲೀಸರು, ಮೃತನ ಪತ್ನಿಯನ್ನು ತನಿಖೆಗೆ ಒಳಪಡಿಸಿದ್ದಾರೆ. ಎರಡೇ ದಿನಗಳಲ್ಲಿ ರಹಸ್ಯ ಬಯಲಿಗೆಳೆದಿದ್ದಾರೆ.
ಪತಿ ಹತ್ಯೆಗೆ ಪತ್ನಿ ಸ್ಕೆಚ್!
ರಮೇಶ್ ಮಾದಿಗರ ಪತ್ನಿ ಶ್ರೀದೇವಿ 20 ವರ್ಷದ ಬಸವರಾಜ್ ಎಂಬ ಯುವಕನ ಜೊತೆಗೆ ಅನೈತಿಕ ಸಂಬಂಧ ಹೊಂದಿದ್ದಳು. ಪ್ರಿಯಕರನ ಜೊತೆ ಸೇರಿ ಶ್ರೀದೇವಿಯೇ ಪತಿಯ ಕೊಲೆಗೆ ಸ್ಕೆಚ್ ಹಾಕಿದ್ದಳು. ಜನವರಿ 12ರಂದು ರಮೇಶ್‌ಗೆ ಮನೆಯಲ್ಲೇ ಫೋನ್ ಬಿಟ್ಟು ಹೋಗುವಂತೆ ಪತ್ನಿ ಶ್ರಿದೇವಿ ಹೇಳಿದ್ದಳು. ಪತ್ನಿ ಕೋರಿಕೆ ಹಿನ್ನೆಲೆಯಲ್ಲಿ ರಮೇಶ್ ಮನೆಯಲ್ಲಿ ಫೋನ್ ಬಿಟ್ಟು ಹಿರೇಬಾಗೇವಾಡಿಗೆ ಕಟ್ಟಡ ಕಾಮಗಾರಿ ಕೆಲಸಕ್ಕೆ ತೆರಳಿದ್ದನು. ಈ ವೇಳೆ ರಮೇಶ್ ಕೆಲಸ ಮಾಡುವ ಸ್ಥಳಕ್ಕೆ ಬಸವರಾಜ ಭೇಟಿ ನೀಡಿದ್ದಾನೆ. ಕಿತ್ತೂರಿಗೆ ಹೋಗಿ ಬರೋಣ ಬಾ ಅಂತ ರಮೇಶ್‌ನನ್ನು ಬಸವರಾಜ್ ಕರೆದಿದ್ದಾನೆ. ಕಿತ್ತೂರಿನಲ್ಲಿ ರಮೇಶ್‌ಗೆ ಕಂಠಪೂರ್ತಿ ಕುಡಿಸಿ ಬಳಿಕ ನಿರ್ಜನ ಪ್ರದೇಶಕ್ಕೆ ಕರೆದೊಯ್ದಿದ್ದಾನೆ.
ಅಲ್ಲಿ ರಮೇಶ್ನ ಗುಪ್ತಾಂಗಕ್ಕೆ ಕಾಲಿನಿಂದ ಬಸವರಾಜ್ ಒದ್ದು, ಬಳಿಕ ಕೊರಳಿಗೆ ಟವಲ್‌ನಿಂದ ಬಿಗಿದು ಕೊಲೆಗೈದಿದ್ದಾನೆ. ನಂತರ ರಸ್ತೆ ಪಕ್ಕವೇ ರಮೇಶ್ ಶವವನ್ನು ಬಸವರಾಜ್ ಎಸೆದಿದ್ದ. ಈ ಹತ್ಯೆಗೈದಿರುವ ವಿಷಯವನ್ನು ಶ್ರೀದೇವಿಗೂ ಆರೋಪಿ ತಿಳಿಸಿದ್ದ. ಪ್ರಕರಣ ದಾಖಲಿಸಿಕೊಂಡು ತನಿಖೆಗಿಳಿದಿದ್ದ ಕಿತ್ತೂರು ಪೊಲೀಸರು ಪತ್ನಿ ಮೇಲೆ ಅನುಮಾನಗೊಂಡು ವಿಚಾರಣೆ ನಡೆಸಿದಾಗ ಪ್ರಕರಣ ಬಯಲಿಗೆ ಬಂದಿದೆ.
ಇದನ್ನೂ ಓದಿ: ಚಲಿಸುತ್ತಿದ್ದ ಬಸ್ ಡ್ರೈವರ್‌ಗೆ ಫಿಟ್ಸ್... ಈ ಮಹಿಳೆ ತೋರಿದ ಧೈರ್ಯಕ್ಕೆ ಎಲ್ಲ ಪ್ರಯಾಣಿಕರು ಸೇಫ್..!