ಬೆಳಗಾವಿ: ವಿಧಾನ ಪರಿಷತ್ ಚುನಾವಣೆ ಬಳಿಕ ಇದೀಗ ಬೆಳಗಾವಿ ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆ ಹಾಗೂ ಕೆಲವು ಗ್ರಾಮ ಪಂಚಾಯಿತಿಗಳ ಸದಸ್ಯರ ಆಯ್ಕೆಗೆ ಮತದಾನ ನಡೆಯುತ್ತಿದೆ.
ಬೆಳಗಾವಿ ಜಿಲ್ಲೆಯ 5 ಪುರಸಭೆ, 11 ಪಟ್ಟಣ ಪಂಚಾಯತಿ ಹಾಗೂ 34 ಗ್ರಾಮ ಪಂಚಾಯತಿಯ 106 ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದೆ. ಅಲ್ಲದೇ 49 ಗ್ರಾಮ ಪಂಚಾಯತಿಯ 55 ಸ್ಥಾನಗಳಿಗೆ ಉಪಚುನಾವಣೆ ನಡೆಯುತ್ತಿದೆ. ಸಂಜೆ 5 ಗಂಟೆಯವರೆಗೆ ಮತದಾನ ಪ್ರಕ್ರಿಯೆ ನಡೆಯಲಿದೆ.
ನಗರ ಸ್ಥಳೀಯ ಸಂಸ್ಥೆಗಳಲ್ಲಿ ಮತದಾನ ಆರಂಭ ಅಥಣಿ, ಹಾರೂಗೇರಿ, ಮುಗಳಖೋಡ, ಮುನವಳ್ಳಿ, ಉಗಾರಖುರ್ದ್ ಪುರಸಭೆಗೆ ಹಾಗೂ ಎಂ.ಕೆ.ಹುಬ್ಬಳ್ಳಿ, ಕಂಕಣವಾಡಿ, ನಾಗನೂರ, ಯಕ್ಸಂಬಾ, ಕಿತ್ತೂರು, ಅರಭಾವಿ, ಐನಾಪುರ, ಶೇಡಬಾಳ, ಚಿಂಚಲಿ, ಬೋರಗಾಂವ, ಕಲ್ಲೋಳಿ ಪಟ್ಟಣ ಪಂಚಾಯತಿಗಳಿಗೆ ಚುನಾವಣೆ ನಡೆಸಲಾಗುತ್ತಿದೆ.
5 ಪುರಸಭೆ, 11 ಪಟ್ಟಣ ಪಂಚಾಯತಿಗಳ 305 ವಾರ್ಡ್‌ಗಳ ಪೈಕಿ 4 ವಾರ್ಡ್‌ಗಳಿಗೆ ಅವಿರೋಧ ಆಯ್ಕೆ ಮಾಡಲಾಗಿದೆ. ಮುಗಳಖೋಡ ಪುರಸಭೆ 1, ಎಂ.ಕೆ.ಹುಬ್ಬಳ್ಳಿ ಪಟ್ಟಣ ಪಂಚಾಯತಿ 3 ಸ್ಥಾನಗಳಿಗೆ ಅವಿರೋಧ ಆಯ್ಕೆ ಮಾಡಲಾಗಿದೆ.
ಅಭ್ಯರ್ಥಿಗಳ ವಿವರ:
ಪುರಸಭೆ, ಪಟ್ಟಣ ಪಂಚಾಯತಿಯ 301 ಸ್ಥಾನಗಳಿಗೆ 902 ಅಭ್ಯರ್ಥಿಗಳು ಕಣದಲ್ಲಿದ್ದಾರೆ.
- ಕಾಂಗ್ರೆಸ್- 228
- ಬಿಜೆಪಿ- 268
- ಜೆಡಿಎಸ್- 37
- ಪಕ್ಷೇತರರು 345 ಸೇರಿ ಒಟ್ಟು 902 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಒಟ್ಟು 2,55,611 ಮತದಾರರು ಈ ಚುನಾವಣೆಯಲ್ಲಿ ಹಕ್ಕು ಚಲಾಯಿಸಲಿದ್ದಾರೆ.
ಯಕ್ಸಂಬಾ ಪ್ರತಿಷ್ಠೆಯ ಕಣ:
ಸ್ಥಳೀಯ ಸಂಸ್ಥೆಗಳಲ್ಲಿ ಚಿಕ್ಕೋಡಿ ತಾಲೂಕಿನ ಯಕ್ಸಂಬಾ ಪಟ್ಟಣ ಪಂಚಾಯತಿ ಪ್ರತಿಷ್ಠೆಯ ಕಣವಾಗಿದೆ. ಹುಕ್ಕೇರಿ ಕುಟುಂಬ ಹಾಗೂ ಜೊಲ್ಲೆ ಕುಟುಂಬಕ್ಕೆ ಯಕ್ಸಂಬಾ ಪ್ರತಿಷ್ಠೆಯ ಕಣವಾಗಿದೆ. ಕ್ಷೇತ್ರದಲ್ಲಿ ಮತ್ತಷ್ಟು ಪ್ರಾಬಲ್ಯ ಸಾಧಿಸಲು ಮಾಜಿ ಸಚಿವ ಪ್ರಕಾಶ ಹುಕ್ಕೇರಿ, ಶಾಸಕ ಗಣೇಶ ಹುಕ್ಕೇರಿ ಹಾಗೂ ಸಚಿವೆ ಶಶಿಕಲಾ ಜೊಲ್ಲೆ, ಸಂಸದ ಅಣ್ಣಾಸಾಬ್ ಜೊಲ್ಲೆ ಈ ಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದಾರೆ.
ಈ ನಾಲ್ವರು ನಾಯಕರು ಯಕ್ಸಂಬಾ ಪಟ್ಟಣದ ನಿವಾಸಿಗಳು. ಯಕ್ಸಂಬಾ ಪಟ್ಟಣ ಪಂಚಾಯತಿಯ 17 ವಾರ್ಡ್‌ಗಳಲ್ಲಿ ಕಾಂಗ್ರೆಸ್ ಬಿಜೆಪಿ ಮಧ್ಯೆ ನೇರಾನೇರ ಹಣಾಹಣಿ ಇದೆ. ಇಂದು ಚುನಾವಣೆ ನಡೆಯಲಿರುವ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಬಹುತೇಕರು ಬಿಜೆಪಿ ಶಾಸಕರಿದ್ದಾರೆ. ಇತ್ತೀಚೆಗೆ ನಡೆದ ಸ್ಥಳೀಯ ಸಂಸ್ಥೆಗಳ ವಿಧಾನ ಪರಿಷತ್ ದ್ವಿಸದಸ್ಯ ಸ್ಥಾನ ಚುನಾವಣೆಯಲ್ಲಿ ಹೀನಾಯ ಸೋಲು ಕಂಡಿದ್ದ ಬಿಜೆಪಿಗೆ ಲೋಕಲ್ ದಂಗಲ್ ಪ್ರತಿಷ್ಠೆಯಾಗಿದೆ.
ಇದನ್ನೂ ಓದಿ:ಪುನೀತ್ ಸ್ಮರಣಾರ್ಥ ಭಟ್ಕಳದಲ್ಲಿ 2 ಸಾವಿರಕ್ಕೂ ಅಧಿಕ ಜನರಿಂದ ನೇತ್ರದಾನ ನೋಂದಣಿ