ಚಿಕ್ಕೋಡಿ(ಬೆಳಗಾವಿ) :ಸಚಿವೆ ಶಶಿಕಲಾ ಜೊಲ್ಲೆ ಅವರ ರಾಜಕೀಯ ಒತ್ತಡಕ್ಕೆ ಮಣಿದು ಸದಲಗಾ ಪೊಲೀಸರು ವಿನಾಕಾರಣ ನಮ್ಮ ಮಕ್ಕಳನ್ನು ಅರೆಸ್ಟ್ ಮಾಡುತ್ತಿದ್ದಾರೆ ಎಂದು ಆರೋಪಿಸಿ ಸದಲಗಾ ಪೊಲೀಸ್ ಠಾಣೆ ಎದುರು ಬೋರಗಾಂವ್ ಪಟ್ಟಣ ಪಂಚಾಯತ್ ಸದಸ್ಯರು, ಉತ್ತಮ್ ಪಾಟೀಲ ಬೆಂಬಲಿಗರು ಮುತ್ತಿಗೆ ಹಾಕಿ ಪ್ರತಿಭಟಿಸಿದ್ದಾರೆ. ಈ ವೇಳೆ ಸದಲಗಾ ಪೊಲೀಸ್ ಠಾಣೆಯ ಸಿಪಿಐ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಘಟನೆಯ ಹಿನ್ನೆಲೆ :ಕಳೆದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ರಮೇಶ ಜಾರಕಿಹೊಳಿ ಬೆಂಬಲಿಗ ಉತ್ತಮ ಪಾಟೀಲ್ ನೇತೃತ್ವದಲ್ಲಿ ಬೋರಗಾಂವ್ ಪಟ್ಟಣ ಪಂಚಾಯತ್‌ನಲ್ಲಿ ಎಲ್ಲ ಸ್ಥಾನಗಳಲ್ಲೂ ಉತ್ತಮ್ ಪಾಟೀಲ ಬೆಂಬಲಿಗರು ಪಕ್ಷೇತರರಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ನಂತರ ಸಚಿವೆ ಶಶಿಕಲಾ ಜೊಲ್ಲೆ ಮತ್ತು ಉತ್ತಮ್ ಪಾಟೀಲ ಬೆಂಬಲಿಗರ ನಡುವೆ ಗಲಾಟೆ ಆಗಿತ್ತು.
ಗಲಾಟೆಯಲ್ಲಿ ಉತ್ತಮ್ ಪಾಟೀಲ ಅವರ 9 ಬೆಂಬಲಿಗರ ಮೇಲೆ ಸದಲಗಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಬಳಿಕ ಉತ್ತಮ್ ಪಾಟೀಲ ಅವರು ಹೈಕೋರ್ಟ್‌ನಲ್ಲಿ ಬೇಲ್ ತೆಗೆದುಕೊಂಡು ಬಂದು ಬಿಡುಗಡೆ ಮಾಡಿಸಿದ್ದರು.
ಆದ್ರೆ, ಅಷ್ಟಕ್ಕೇ ಸುಮ್ಮನಾಗದ ಸದಲಗಾ ಪೊಲೀಸರು, ಶಶಿಕಲಾ ಜೊಲ್ಲೆ ಅವರ ರಾಜಕೀಯ ಒತ್ತಡಕ್ಕೆ ಮಣಿದು ನಮ್ಮ ಮಕ್ಕಳಿಗೆ ವಿನಾಕಾರಣ ಕಿರುಕುಳ ಕೊಡುತ್ತಿದ್ದರಲ್ಲದೇ, ಬಂಧಿಸಿ ಕೇಸ್ ಹಾಕುತ್ತಿದ್ದಾರೆ ಎಂಬುದು ಗೆದ್ದ ಪಕ್ಷೇತರ ಅಭ್ಯರ್ಥಿಗಳ ಆರೋಪವಾಗಿದೆ.
ಪ್ರಕಾಶ ಹುಕ್ಕೇರಿ ಭೇಟಿ, ಮನವೊಲಿಕೆ :ಸದಲಗಾ ಪೊಲೀಸ್ ಠಾಣೆ ಎದುರು ಕಳೆದ ರಾತ್ರಿಯಿಂದ ಪ್ರತಿಭಟನೆ ನಡೆದಿದೆ. ಸ್ಥಳಕ್ಕೆ ಮಾಜಿ ಸಂಸದ ಪ್ರಕಾಶ ಹುಕ್ಕೇರಿ ಭೇಟಿ ನೀಡಿ ಸಮಸ್ಯೆ ಆಲಿಸಿದರು.
ಪ್ರತಿಭಟನೆ ಕೈ ಬಿಡುವಂತೆ ಮನವಿ ಮಾಡಿಕೊಂಡರು. ಈ ವೇಳೆ ಮಾತನಾಡಿದ ಬೋರಗಾಂವ್ ಪಟ್ಟಣ ಪಂಚಾಯತ್ ಸದಸ್ಯರು ಹಾಗೂ ಸ್ಥಳೀಯರು, ಸದಲಗಾ ಪೊಲೀಸರು ಸಚಿವೆ ಶಶಿಕಲಾ ಜೊಲ್ಲೆ ಅವರ ರಾಜಕೀಯ ಒತ್ತಡಕ್ಕೆ ಮಣಿದು ನಮ್ಮ ಮೇಲೆ ಕೇಸ್ ಹಾಕುತ್ತಿದ್ದಾರೆ.