ಬೆಳಗಾವಿ :ಅಧಿವೇಶನದ ವೇಳೆ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ಕಾರ್ಯಕರ್ತರು ನಡೆಸಿದ ಪುಂಡಾಟಿಕೆ ಪ್ರಕರಣ ಸಂಬಂಧ ಬೆಳಗಾವಿ ಪೊಲೀಸರು ಚಾರ್ಜ್‌ಶೀಟ್ ಸಲ್ಲಿಸಿದ್ದಾರೆ.
ಕನ್ನಡ ಪರ ಹೋರಾಟಗಾರ ಅಶೋಕ ಚಂದರಗಿ ಎಂಇಎಸ್ ಕಾರ್ಯಕರ್ತರು ಬೆಳಗಾವಿಯಲ್ಲಿ ಸರ್ಕಾರಿ ವಾಹನಗಳ ಮೇಲೆ ಕಲ್ಲು ತೂರಿ ಬೆಂಕಿ ಹಚ್ಚಿದ್ದರು. ಘಟನೆ ಸಂಬಂಧ ಕಾರ್ಯಕರ್ತರ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಾಗಿತ್ತು. ಆದರೆ, ಈಗ ದೇಶದ್ರೋಹ ಸೆಕ್ಷನ್ ಕೈಬಿಟ್ಟು ಚಾರ್ಜ್‌ಶೀಟ್ ಸಲ್ಲಿಸಿರುವ ಬೆಳಗಾವಿ ಪೊಲೀಸರ ನಡೆ ಕನ್ನಡ ಪರ ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿದೆ.
38 ಆರೋಪಿಗಳ ವಿರುದ್ಧ ನಗರದ ಮಾರ್ಕೆಟ್, ಖಡೇಬಜಾರ್, ಕ್ಯಾಂಪ್ ಠಾಣೆಯಲ್ಲಿ ದಾಖಲಾಗಿದ್ದ ಕೇಸ್‌ಗಳ ಚಾರ್ಜ್‌ಶೀಟ್ ಸಲ್ಲಿಕೆ ಮಾಡಲಾಗಿದೆ. ಜಾರ್ಜ್‌ಶೀಟ್ ಸಲ್ಲಿಕೆ ಬಗ್ಗೆ ಪೊಲೀಸ್ ಉನ್ನತ ಮೂಲಗಳಿಂದ ಮಾಹಿತಿ ದೊರೆತಿದೆ.
ಡಿಸೆಂಬರ್ ತಿಂಗಳಿನಲ್ಲಿ ಬೆಳಗಾವಿ ಸುವರ್ಣಸೌಧದಲ್ಲಿ ನಡೆದಿದ್ದ ಚಳಿಗಾಲದ ಅಧಿವೇಶನದಲ್ಲಿ ಎಂಇಎಸ್ ಪುಂಡರ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸುವುದಾಗಿ ಸಿಎಂ ಘೋಷಣೆ ಮಾಡಿದ್ದರು. ಸಿಎಂ ಬೊಮ್ಮಾಯಿ ಸದನದಲ್ಲಿ ಹೇಳಿಕೆ ನೀಡುತ್ತಿದ್ದಂತೆ ಪೊಲೀಸರು ದೇಶದ್ರೋಹ ಪ್ರಕರಣ ದಾಖಲಿಸಿದ್ದರು. ದೇಶದ್ರೋಹ ಆರೋಪದಡಿ 124(ಎ) ಕಲಂ ಅಡಿಯಲ್ಲಿ ಕೇಸ್ ದಾಖಲಾಗಿತ್ತು.
ಪ್ರಕರಣದ ವಿವರ : ಡಿ.17ರಂದು ರಾತ್ರಿ ಸರ್ಕಾರಿ ವಾಹನಗಳ ಮೇಲೆ ಕಲ್ಲು ತೂರಿ ಬೆಂಕಿ ಹಚ್ಚಿ ಎಂಇಎಸ್ ಪುಂಡರು ಪುಂಡಾಟಿಕೆ ಪ್ರದರ್ಶಿಸಿದ್ದರು. ಸಾಲದೆಂಬಂತೆ ಅನಗೋಳದ ಸಂಗೊಳ್ಳಿ ರಾಯಣ್ಣ ಮೂರ್ತಿಯನ್ನು ಧ್ವಂಸಗೊಳಿಸಿದ್ದರು.
ಚಾರ್ಜ್‌ಶೀಟ್ ಸಲ್ಲಿಕೆ ವೇಳೆ ಬೆಳಗಾವಿ ರಾಜಕಾರಣಿಗಳ ಒತ್ತಡಕ್ಕೆ ಪೊಲೀಸರು ಮಣಿದರಾ?ಎಂಬ ಸಂಶಯ ಮೂಡತೊಡಗಿವೆ. ಸಿಎಂ ಬೊಮ್ಮಾಯಿ ಸೂಚನೆ ನೀಡಿದ್ದರೂ, ಜಾರ್ಜ್‌ಶೀಟ್ ಸಲ್ಲಿಕೆ ವೇಳೆ 124(ಎ) ಕಲಂ ವಾಪಸ್ ಪಡೆದಿದ್ದೇಕೆ? ಎಂದು ರಾಜ್ಯ ಸರ್ಕಾರದ ವಿರುದ್ಧ ಕನ್ನಡಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ.
ಇದನ್ನೂ ಓದಿ:ಬೆಳಗಾವಿ ಗಲಭೆ: 27 ಆರೋಪಿಗಳಿಗೆ 14 ದಿನ ನ್ಯಾಯಾಂಗ ಬಂಧನ