ಶಿವಮೊಗ್ಗ: ಎರಡು ದಿನದಿಂದ ಬೆಳಗಾವಿಯಲ್ಲಿ ಒಂದಷ್ಟು ಜನ ಪುಂಡತನ ಮೆರೆಯುತ್ತಿದ್ದಾರೆ. ಶಾಂತಿ ಕದಡುವ ಕೆಲಸ ಮಾಡುವ ಜೊತೆ ಸರ್ಕಾರಿ ವಾಹನಗಳನ್ನ ಜಖಂ ಮಾಡಿದ್ದಾರೆ. ಜೊತೆಗೆ ಸಂಗೊಳ್ಳಿ ರಾಯಣ್ಣನ ಪ್ರತಿಮೆ ಧ್ವಂಸ ಮಾಡಿದ್ದಾರೆ.
ಈ ಬಗ್ಗೆ ನಾನು ಕಠಿಣ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಸೂಚಿಸಿದ್ದೇನೆ. ಯಾರೇ ಆಗಿದ್ದರೂ ಅವರನ್ನು ವಶಕ್ಕೆ ಪಡೆದು ಬುದ್ಧಿ ಕಲಿಸಲು ಹೇಳಿದ್ದೇನೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.
ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಲ್ಲಿ ಗೃಹಸಚಿವರು ಪ್ರತಿಕ್ರಿಯೆ ನೀಡಿದರು. ಶಿವಾಜಿ ಹಾಗೂ ಸಂಗೊಳ್ಳಿ ರಾಯಣ್ಣ ಇಬ್ಬರೂ ರಾಷ್ಟ್ರಕ್ಕಾಗಿ ಪ್ರಾಣಾರ್ಪಣೆ ಮಾಡಿದ ದೊಡ್ಡ ವ್ಯಕ್ತಿಗಳು. ಇಂಥ ದೊಡ್ಡ ವ್ಯಕ್ತಿಗಳನ್ನು ರಾಜಕಾರಣಕ್ಕೆ ಬಳಕೆ ಮಾಡುವವರನ್ನು ಕ್ಷಮಿಸಲು ಸಾಧ್ಯವಿಲ್ಲ. ಮಹಾನ್ ನಾಯಕರ ಪ್ರತಿಮೆ ಧ್ವಂಸ ಮಾಡಿದಾಕ್ಷಣ ಅವರ ಆಚಾರ, ವಿಚಾರಗಳು ಹಾಳಾಗುವುದಿಲ್ಲ ಎಂದರು.