ಬೆಳಗಾವಿ: ಬೆಳಗಾವಿಯಲ್ಲಿ ಎಂಇಎಸ್ ಪುಂಡಾಟ ಪ್ರಕರಣ ಹಿನ್ನೆಲೆ 27 ಮಂದಿ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಇಂದು ಬೆಳಗ್ಗೆ 11 ಗಂಟೆಗೆ ಬೆಳಗಾವಿಯ 2ನೇ ಜೆಎಂಎಫ್ಸಿ ನ್ಯಾಯಾಲಯಕ್ಕೆ ಆರೋಪಿಗಳನ್ನು ಹಾಜರುಪಡಿಸಿ ಅತ್ಯಂತ ತ್ವರಿತ ಗತಿಯಲ್ಲಿ ವಿಚಾರಣೆ ನಡೆಸಿ 14 ದಿನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಬಂಧಿತ ಎಲ್ಲಾ ಆರೋಪಿಗಳನ್ನು ಪೊಲೀಸರು ಹಿಂಡಲಗಾ ಜೈಲಿಗೆ ಕರೆದೊಯ್ದಿದ್ದಾರೆ.
ಶುಭಂ ಶೆಳ್ಕೆ, ಶಿವಾಜಿ ಸುಂಟಕರ್ ಸೇರಿ 25 ಜನ ಆರೋಪಿಗಳನ್ನು ಮೊದಲು ವೈದ್ಯಕೀಯ ತಪಾಸಣೆಗೆ ಒಳಪಡಿಸಿ ನಂತರ ನ್ಯಾಯಾಲಯಕ್ಕೆ ಕರೆತಂದು ಹಾಜರುಪಡಿಸಲಾಯಿತು. ಬಳಿಕ ಕೋರ್ಟ್ ಆರೋಪಿಗಳನ್ನು ಪೊಲೀಸರು ನ್ಯಾಯಾಂಗ ಬಂಧನಕ್ಕೆ ನೀಡಿತು.
ಬೆಳಗಾವಿಯಲ್ಲಿ ಅಧಿವೇಶನ ನಡೆದ ಸಂದರ್ಭದಲ್ಲಿ ಎಂಇಎಸ್ ಹಾಗೂ ಕನ್ನಡಪರ ಸಂಘಟನೆಗಳ ನಡುವೆ ತಿಕ್ಕಾಟ ನಡೆಯುವುದು ಬಹುತೇಕ ಸಾಮಾನ್ಯ. ಈ ಸಾರಿಯೂ ಇದೆ ಪರಿಸ್ಥಿತಿ ಮರುಕಳಿಸಿದ್ದು, ಕೊಲ್ಹಾಪುರದಲ್ಲಿ ಎಂಇಎಸ್ ಕಾರ್ಯಕರ್ತರು ಕನ್ನಡ ಬಾವುಟವನ್ನು ಸುಡುವ ಮೂಲಕ ಆರಂಭವಾದ ಗದ್ದಲ ಎರಡು ಕಡೆಯಿಂದ ಹೋರಾಟ ಆರಂಭವಾಗಿದೆ.
ಓದಿ:ರಮಾಕಾಂತ್ ಕೊಂಡೂಸ್ಕರ್, ಶುಭಂ ಶೆಳ್ಕೆ ಸೇರಿ 27 ಜನರು ಹಿಂಡಲಗಾ ಜೈಲಿಗೆ.. ಬೆಳಗಾವಿಯಲ್ಲಿ ನಿಷೇಧಾಜ್ಞೆ
ನಿನ್ನೆ ಕನ್ನಡ ಪರ ಸಂಘಟನೆ ಮುಖಂಡರು ಬೆಂಗಳೂರಿನಲ್ಲಿ ಶಿವಾಜಿ ಪ್ರತಿಮೆಗೆ ಮಸಿ ಬಳಿದು ಅಪಮಾನ ಮಾಡಿದರು. ಇದರ ಜೊತೆ ವಿಧಾನಸಭೆಯಲ್ಲಿ ಖಂಡನಾ ನಿರ್ಣಯವನ್ನು ಕೈಗೊಳ್ಳಲಾಗಿತ್ತು. ಇದಕ್ಕೆ ಪ್ರತೀಕಾರದ ರೂಪದಲ್ಲಿ ನಿನ್ನೆ ಎಂಇಎಸ್ ಕಾರ್ಯಕರ್ತರು 20ಕ್ಕೂ ಹೆಚ್ಚು ಸರ್ಕಾರಿ ವಾಹನಗಳ ಮೇಲೆ ಕಲ್ಲು ತೂರಾಟ ನಡೆಸಿದ್ದರು. ಅಲ್ಲದೆ ಬೆಳಗಿನಜಾವ ಸಂಗೊಳ್ಳಿ ರಾಯಣ್ಣ ಪ್ರತಿಮೆಯನ್ನು ಭಗ್ನಗೊಳಿಸಿದ್ದರು.
ಇದೀಗ ಬೆಳಗಾವಿ ಪರಿಸ್ಥಿತಿ ಪ್ರಕ್ಷುಬ್ಧಗೊಳಿಸಿದ ಹಿನ್ನೆಲೆ 27 ಮಂದಿಯನ್ನು ಪೊಲೀಸರು ಬಂಧಿಸಿದ್ದರು. ಪೊಲೀಸರು ಆರೋಪಿಗಳನ್ನು ರಾತ್ರಿಯೇ ನ್ಯಾಯಾಧೀಶರ ಮುಂದೆ ಹಾಜರುಪಡಿಸಿ ಹಿಂಡಲಗಾ ಜೈಲಿಗೆ ಕಳುಹಿಸಲಾಗಿತ್ತು. ಇಂದು ಬೆಳಗ್ಗೆ ಮತ್ತೆ ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ ಆರೋಪಿಗಳನ್ನು 14 ದಿನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಸದ್ಯ ಆರೋಪಿಗಳನ್ನು ಹಿಂಡಲಗಾ ಜೈಲಿಗೆ ಕೊಂಡೊಯ್ದಿರುವ ಪೊಲೀಸರು ಸಂಜೆಯ ನಂತರ ಬಳ್ಳಾರಿ ಜೈಲಿಗೆ ಸ್ಥಳಾಂತರಿಸುವ ಸಾಧ್ಯತೆಯಿದೆ.