ಬೆಳಗಾವಿ: ನಗರದ ವಿಜಯ್ ಇನ್ಸ್ಟಿಟ್ಯೂಟ್ ಆಫ್ ಪ್ಯಾರ ಮೆಡಿಕಲ್ ಕಾಲೇಜಿನಲ್ಲಿ ಹಿಜಾಬ್‌ಗೆ ಅವಕಾಶ ನೀಡುವಂತೆ ವಿದ್ಯಾರ್ಥಿನಿಯರು ಪಟ್ಟು ಹಿಡಿದ ಘಟನೆ ನಡೆಯಿತು. ಈ ವೇಳೆ ಕೆಲವರು ಪ್ರತಿಭಟನೆ ನಡೆಸಿದ್ದಾರೆ. ಒಂದು ಧರ್ಮದ ಪರ ಘೋಷಣೆ ಕೂಗಿದ ಆರು ಯುವಕರನ್ನು ಪೊಲೀಸರು ವಶಕ್ಕೆ ಪಡೆದರು.
ಕಾಲೇಜಿನಲ್ಲಿ 250ಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದು, ಶೇ. 50ರಷ್ಟು ವಿದ್ಯಾರ್ಥಿನಿಯರು ಮುಸ್ಲಿಂ ಸಮಾಜದವರಿದ್ದಾರೆ. ಇಂದು 20ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ತರಗತಿಯಲ್ಲಿ ಹಿಜಾಬ್‌ಗೆ ಅವಕಾಶ ನೀಡುವಂತೆ ಪಟ್ಟು ಹಿಡಿದ್ದಾರೆ. ಆದ್ರೆ, ಕಾಲೇಜು ಆಡಳಿತ ಮಂಡಳಿ ಕೋರ್ಟ್ ಆದೇಶವನ್ನು ಪಾಲನೆ ಮಾಡುವಂತೆ ಸೂಚನೆ ಕೊಟ್ಟಿದೆ.
ಹಾಗಾಗಿ, ವಿದ್ಯಾರ್ಥಿನಿಯರು ಕ್ಲಾಸಿಗೆ ಬಹಿಷ್ಕಾರ ಹಾಕಿ ಹೊರ ಹೋಗಲು ಮುಂದಾಗಿದ್ದಾರೆ. ಕಾಲೇಜು ಸಿಬ್ಬಂದಿ, ಪೊಲೀಸರು ವಿದ್ಯಾರ್ಥಿಗಳನ್ನು ತಡೆದು ಒಳಗಡೆ ಕೌನ್ಸಿಲಿಂಗ್ ಮಾಡಲು ಪ್ರಯತ್ನಿಸಿದ್ದಾರೆ. ಈ ವೇಳೆ ವಿದ್ಯಾರ್ಥಿಗಳು ಮತ್ತು ಪೊಲೀಸರ ನಡುವೆ ಮಾತಿನ ಚಕಮಕಿ ನಡೆದಿದೆ. ಹಿಜಾಬ್ ತೆಗೆಯುವುದಿಲ್ಲ, ಕಾಲೇಜು ಒಳಗೆ ಹೋಗುವುದಿಲ್ಲವೆಂದು ವಿದ್ಯಾರ್ಥಿನಿಯರು ಪಟ್ಟು ಹಿಡಿದರು.
ಈ ವಿಷಯ ವಿದ್ಯಾರ್ಥಿನಿಯರ ಪೋಷಕರಿಗೆ ತಿಳಿಯುತ್ತಿದ್ದಂತೆ ಕಾಲೇಜಿನತ್ತ ಧಾವಿಸಿದ ಯುವಕರ ಗುಂಪು, ಹಿಜಾಬ್ ಧರಿಸಲು ಅವಕಾಶ ನೀಡಬೇಕು ಎಂದು ಒತ್ತಾಯಿಸಿದರು. ನಂತರ ಪ್ರಾಂಶುಪಾಲರ ವಿರುದ್ಧ ಯುವಕರು ಆಕ್ರೋಶ ವ್ಯಕ್ತಪಡಿಸಿದರು. ಸ್ಥಳಕ್ಕೆ ಆಗಮಿಸಿದ ಡಿಸಿಪಿ ರವೀಂದ್ರ ಗಡಾದಿ ವಿದ್ಯಾರ್ಥಿಗಳ, ಯುವಕರ ಮನವೊಲಿಸಲು ಪ್ರಯತ್ನಿಸಿದರು. ಈ ವೇಳೆ ಕೆಲ ಯುವಕರು ಘೋಷಣೆ ಕೂಗಿದರು. ಘೋಷಣೆ ಕೂಗಿದ ಆರು ಯುವಕರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಪೊಲೀಸ್ ಕಮಿಷನರ್ ಡಾ.ಬೋರಲಿಂಗಯ್ಯ ಸ್ಪಷ್ಟನೆ:ಕಾಲೇಜು ಬಳಿ ಕಾಲೇಜಿಗೆ ಸಂಬಂಧವಿಲ್ಲದ ಯುವಕರು ಬಂದಿದ್ದರು. ಹಾಗಾಗಿ ಪರಿಸ್ಥಿತಿ ತಿಳಿಗೊಳಿಸಲು ಕೆಲವರನ್ನು ವಶಕ್ಕೆ ಪಡೆಯಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಎಂ.ಬಿ.ಬೋರಲಿಂಗಯ್ಯ ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ:'ನಾಲ್ಕು ಕಾಲೇಜುಗಳಲ್ಲಿ ಮಾತ್ರ ಮಕ್ಕಳು ಹಿಜಾಬ್ ಧರಿಸಿ ಬರಲು ಹಠ ಹಿಡಿದಿದ್ದಾರೆ'
ಕಾಲೇಜಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಾಲೇಜಿನಲ್ಲಿ ವಿದ್ಯಾರ್ಥಿಗಳು ಹಿಜಾಬ್ ಧರಿಸಲು ಅವಕಾಶ ನೀಡುವಂತೆ ಪಟ್ಟು ಹಿಡಿದಿದ್ದರು. ಆದರೆ, ಕಾಲೇಜಿಗೆ ಸಂಬಂಧ ಇಲ್ಲದವರು ಬಂದು ಖ್ಯಾತೆ ತೆಗೆದಿದ್ದಾರೆ. ಈ ವೇಳೆ ಮುಂಜಾಗ್ರತಾ ಕ್ರಮವಾಗಿ ಕೆಲವರನ್ನು ವಶಕ್ಕೆ ಪಡೆಯಲಾಗಿದೆ. ಅಲ್ಲಾ ಹು ಅಕ್ಬರ್ ಘೋಷಣೆ ಬಗ್ಗೆ ಪರಿಶೀಲನೆ ನಡೆಸಲಾಗುವುದು. ನಗರದ ಎಲ್ಲಾ ಸೂಕ್ಷ್ಮ ಪ್ರದೇಶದಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ. ಕಾಲೇಜು ಗೇಟ್ ಬಳಿ ಯಾರೂ ಬರದಂತೆ ಕ್ರಮ ವಹಿಸಲಾಗಿದೆ ಎಂದು ತಿಳಿಸಿದರು.