ಬೆಳಗಾವಿ:ನಾಡಿನಾದ್ಯಂತ ಇಂದು ಶ್ರೀಕೃಷ್ಣ ಜನ್ಮಾಷ್ಠಮಿ ಸಡಗರ ಮನೆ ಮಾಡಿದೆ. ಎಲ್ಲೆಡೆ ಹಿಂದೂಗಳು ನಮ್ಮ ಪುಟ್ಟ ಮನೆ ಮಕ್ಕಳಿಗೆ ಕೃಷ್ಣನ ವೇಷಭೂಷಣ ತೊಡಿಸಿ ಸಂಭ್ರಮಿಸುತ್ತಿದ್ದಾರೆ. ಮತ್ತೆ ಕೆಲವರು ಕೃಷ್ಣನೊಂದಿಗೆ ರಾಧಾ ಹಾಗೂ ತಾಯಿ ದೇವಕಿಯ ವೇಷವನ್ನೂ ಮಕ್ಕಳಿಗೆ ಹಾಕಿಸಿ ಜನ್ಮಾಷ್ಠಮಿ ಆಚರಣೆ ಮಾಡುತ್ತಿದ್ದಾರೆ.
ಆದರೆ, ಗೋಕುಲಾಷ್ಠಮಿ ಅಂಗವಾಗಿ ಬೆಳಗಾವಿ ಮುಸ್ಲಿಂ ಕುಟುಂಬವೊಂದು ಕೂಡ ತಮ್ಮ ಮುದ್ದಿನ ಮೊಮ್ಮಗನಿಗೆ ಕೃಷ್ಣನ ವೇಷಭೂಷಣ ಹಾಕಿ ಗಮನ ಸಳೆದರು. ಇಲ್ಲಿನ ಸದಾಶಿವ ನಗರದ ದಸ್ತಗೀರ್ ಮೊಕಾಶಿ ಎಂಬುವವರ ಕುಟುಂಬ ತಮ್ಮ ಮೊಮ್ಮಗ ಅದ್ವಾನ್ ಆಸೀಪ್ ಮೊಕಾಶಿಗೆ ಕೃಷ್ಣನ ವೇಷಭೂಷಣ ಹಾಕಿಸಿ ಖುಷಿಪಟ್ಟರು.
ನಗರದ ಲವ್ ಡೆಲ್ ಶಾಲೆಯಲ್ಲಿ ಆಸೀಪ್ ಎಲ್ಕೆಜಿ ಓದುತ್ತಿದ್ದಾನೆ. ಶಾಲೆಯಲ್ಲಿ ಶ್ರೀಕೃಷ್ಣ ಜನ್ಮಾಷ್ಠಮಿ ನಿಮಿತ್ತ ಶಿಕ್ಷಕರು ವೇಷಭೂಷಣ ಸ್ಪರ್ಧೆ ಆಯೋಜಿಸಿದ್ದು, ಈ ಬಾಲಕನಿಗೂ ಕೃಷ್ಣನ ಪೋಷಾಕು ಧರಿಸಿಕೊಂಡು ಬರುವಂತೆ ಹೇಳಿದ್ದರು. ಅಂತೆಯೇ ಮೊಕಾಶಿ ಕುಟುಂಬದವರು ಮೊಮ್ಮಗನಿಗೆ ಕೃಷ್ಣನ ವೇಷಭೂಷಣ ಹಾಕಿಸಿ ಸ್ಪರ್ಧೆಯಲ್ಲಿ ಭಾಗವಹಿಸಲು ಕಳುಹಿಸಿದ್ದಾರೆ.