ಬೆಳಗಾವಿ: ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಇವಿಎಂ(EVM) ಜೊತೆ ವಿವಿಪ್ಯಾಟ್(VVPAT) ಬಳಸದೇ ಅಕ್ರಮ ಎಸಗಲಾಗಿದೆ ಎಂದು ಆರೋಪಿಸಿರುವ ಎಂಇಎಸ್, ಆಪ್, ಕಾಂಗ್ರೆಸ್, ಎಐಎಂಐಎಂ, ಪಕ್ಷೇತರ ಸೇರಿ 30ಕ್ಕೂ ಹೆಚ್ಚು ಪರಾಜಿತ ಅಭ್ಯರ್ಥಿಗಳು ಮರಳಿ ಬ್ಯಾಲೆಟ್ ಪೇಪರ್ ಮೇಲೆ ಮರುಚುನಾವಣೆ ನಡೆಸುವಂತೆ ನಗರದ ಡಿಸಿ ಕಚೇರಿಯ ಮುಂದೆ ಪ್ರತಿಭಟನೆ ನಡೆಸಿದರು.
EVM ಜೊತೆ VVPAT ಬಳಸದೇ ಅಕ್ರಮ ಆರೋಪ: ಮರುಚುನಾವಣೆಗೆ ಪರಾಜಿತ ಅಭ್ಯರ್ಥಿಗಳ ಒತ್ತಾಯ! - ಇವಿಎಂ ಜೊತೆ ವಿವಿ ಪ್ಯಾಟ್ ಬಳಸದೇ ಅಕ್ರಮ
ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಇವಿಎಂ(EVM) ಜೊತೆ ವಿವಿಪ್ಯಾಟ್(VVPAT) ಬಳಸದೇ ಅಕ್ರಮ ಎಸಗಲಾಗಿದೆ. ಬಿಜೆಪಿಯವರು ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಪರಾಜಿತ ಕಾಂಗ್ರೆಸ್ ಅಭ್ಯರ್ಥಿ ಆರೋಪಿಸಿದ್ದಾರೆ. ಮತ್ತೊಮ್ಮೆ ಬ್ಯಾಲೆಟ್ ಪೇಪರ್ ಮೇಲೆ ಮರುಚುನಾವಣೆ ನಡೆಸಬೇಕು ಎಂದು ವಿವಿಧ ಪಕ್ಷಗಳ ಪರಾಜಿತ ಅಭ್ಯರ್ಥಿಗಳು ಡಿಸಿ ಮೂಲಕ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ಈ ವೇಳೆ ಮಾತನಾಡಿದ ಪರಾಜಿತ ಅಭ್ಯರ್ಥಿಗಳು, ಚುನಾವಣೆ ಸಂದರ್ಭದಲ್ಲಿ ನಮಗೆ ಅನ್ಯಾಯವಾಗಿದೆ. ಮತದಾರರ ಲಿಸ್ಟ್ ಬದಲಾವಣೆ ಮಾಡುವ ಮೂಲಕ ಸಾಕಷ್ಟು ದುರುಪಯೋಗ ಮಾಡಿಕೊಂಡಿದ್ದಾರೆ. ಸ್ಥಳೀಯ ಶಾಸಕರೇ ಚುನಾವಣೆ ನಡೆಯುವ ಸಂದರ್ಭದಲ್ಲೇ 35ಕ್ಕೂ ಹೆಚ್ಚು ಅಭ್ಯರ್ಥಿಗಳ ಗೆಲ್ಲಲಿದ್ದಾರೆ ಎಂದು ಹೇಳಿದ್ದಾರೆ. ಬಿಜೆಪಿ ಒಳಗಿಂದೊಳಗೆ ಕುತಂತ್ರ ಮಾಡಿ ಗೆದ್ದಿದ್ದಾರೆ. ನಾವು ಅವರನ್ನು ಅಧಿಕಾರ ನಡೆಸಲು ಬಿಡುವುದಿಲ್ಲ. ಮರು ಚುನಾವಣೆ ಆಗಬೇಕೆಂದು ಡಿಸಿ ಮೂಲಕ ಒತ್ತಾಯಿಸಿದರು.
ಸೆಪ್ಟೆಂಬರ್ 3ರಂದು ಬೆಳಗಾವಿ ಮಹಾನಗರ ಪಾಲಿಕೆಯ 58ವಾರ್ಡ್‌ಗಳಿಗೆ ಚುನಾವಣೆ ನಡೆದಿತ್ತು. ಸೆ.6ರಂದು ಚುನಾವಣಾ ಫಲಿತಾಂಶ ಪ್ರಕಟವಾಗಿತ್ತು. 58 ವಾರ್ಡ್‌ಗಳ ಪೈಕಿ 35 ಬಿಜೆಪಿ, 10 ಕಾಂಗ್ರೆಸ್, 10 ಪಕ್ಷೇತರ, ಎರಡು ಎಂಇಎಸ್, ಓರ್ವ ಎಐಎಂಐಎಂ ಅಭ್ಯರ್ಥಿ ಜಯ ಸಾಧಿಸಿದ್ದರು.