ಬೆಳಗಾವಿ: ಇಂದು ದೇಶದಲ್ಲಿ ಜನತಾ ಕರ್ಫ್ಯೂಗೆ ಕರೆ ನೀಡಿದ ಹಿನ್ನೆಲೆಯಲ್ಲಿ ಸದಾ ಭಕ್ತರಿಂದ ತುಂಬಿ ತುಳುಕುತ್ತಿದ್ದ ಶ್ರೀಕ್ಷೇತ್ರ ಸವದತ್ತಿ ಯಲ್ಲಮ್ಮನ ದೇವಸ್ಥಾನ ಭಕ್ತರಿಲ್ಲದೆ ಬಣಗುಡುತ್ತಿದೆ.
ಭಕ್ತರಿಲ್ಲದೆ ಮುಚ್ಚಿದ ಭಂಡಾರ ದೇಗುಲ: ಜನತಾ ಕರ್ಫ್ಯೂಗೆ ಭಾರಿ ಬೆಂಬಲ
ದೇಶವ್ಯಾಪಿ ಪ್ರಧಾನಿ ನರೇಂದ್ರ ಮೋದಿಯವರು ಕರೆ ಕೊಟ್ಟಿರುವ ಜನತಾ ಕರ್ಫ್ಯೂಗೆ ಭಾರಿ ಬೆಂಬಲ ವ್ಯಕ್ತವಾಗಿದೆ. ಪ್ರಸಿದ್ಧ ಪುಣ್ಯ ಕ್ಷೇತ್ರಗಳು ಸಂಪೂರ್ಣವಾಗಿ ಬಂದ್ ಆಗಿದೆ. ಈ ನಿಟ್ಟಿನಲ್ಲಿ ಪುಣ್ಯಕ್ಷೇತ್ರ ಸವದತ್ತಿಯಲ್ಲಿಯೂ ಕೂಡಾ ಭಕ್ತರಿಲ್ಲದೆ ದೇವಾಲಯ ಬಣಗುಡುತ್ತಿದೆ.
ಜಿಲ್ಲೆಯ ಸವದತ್ತಿ ತಾಲೂಕಿನ ಯಲ್ಲಮ್ಮನ ದೇವಸ್ಥಾನ ಖಾಲಿ ಖಾಲಿಯಾಗಿದೆ. ಕಳೆದೆರಡು ದಿನಗಳ ಹಿಂದೆ ದೇಶದ ಪ್ರದಾನಿಯವರು ಕೊರೊನಾ ವೈರಸ್ ತಡೆಗಟ್ಟುವ ಹಿನ್ನೆಲೆಯಲ್ಲಿ ಹಾಗೂ ವೈದ್ಯರಿಗೆ ಗೌರವ ಸೂಚಿಸುವ ಸಲುವಾಗಿ ಜನತಾ ಕರ್ಫ್ಯೂಗೆ ಕರೆ ನೀಡಿದ್ದಕ್ಕೆ ಜಿಲ್ಲೆಯಲ್ಲೂ ಭಾರಿ ಬೆಂಬಲ ವ್ಯಕ್ತವಾಗಿದೆ.
ಈ ಹಿನ್ನೆಲೆ ಶ್ರೀ ಯಲ್ಲಮ್ಮ ದೇವಸ್ಥಾನ ಹಾಗೂ ಸವದತ್ತಿ ತಾಲೂಕಿನ ಉಗರಗೋಳ, ಹಂಚಿನಾಳ, ಚಿಕ್ಕುಂಬಿ, ಚುಳಕಿ ಹಾಗೂ ಹಂಚಿನಾಳ ಗ್ರಾಮಗಳಲ್ಲಿ ಅಂಗಡಿ ಮುಂಗಟ್ಟುಗಳು ಬಂದ್ ಆಗಿದ್ದರ ಪರಿಣಾಮ ರಸ್ತೆಗಳು ಬಿಕೋ ಎನ್ನುತ್ತಿವೆ. ಜಿಲ್ಲೆಯ ಸವದತ್ತಿ, ಖಾನಾಪೂರ, ರಾಮದುರ್ಗ ಕಿತ್ತೂರು ಸೇರಿದಂತೆ ಎಲ್ಲ ತಾಲೂಕುಗಳಲ್ಲಿಯೂ ಜನತಾ ಕರ್ಫ್ಯೂಗೆ ಸಂಪೂರ್ಣ ಬೆಂಬಲವನ್ನು ಜನರು ವ್ಯಕ್ತಪಡಿಸಿದ್ದಾರೆ.