ಬೆಳಗಾವಿ:ಡಿಸಿಸಿ ಬ್ಯಾಂಕಿನಲ್ಲಿ ಪ್ರಾಬಲ್ಯ ಸಾಧಿಸಲು ಬೆಳಗಾವಿ ಬಿಜೆಪಿ ನಾಯಕರ ಮಧ್ಯೆ ಪೈಪೋಟಿ ತೀವ್ರಗೊಂಡಿವೆ. ಎರಡು ವಾರಗಳ ಹಿಂದೆ ಬ್ಯಾಂಕಿನ ನಿರ್ದೇಶಕರ ಚುನಾವಣೆ ವೇಳೆ ಒಂದಾಗಿದ್ದ ಜಿಲ್ಲೆಯ ನಾಯಕರು ಇದೀಗ ನಾಳೆ ನಡೆಯಲಿರುವ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆಗೆ ಭಿನ್ನರಾಗ ಹಾಡುತ್ತಿದ್ದಾರೆ. ಡಿಸಿಎಂ ಲಕ್ಷ್ಮಣ ಸವದಿ, ಕತ್ತಿ ಸಹೋದರರು ಹಾಗೂ ಜಾರಕಿಹೊಳಿ ಸಹೋದರರು ಅನುಸರಿಸುತ್ತಿರುವ ನಿಗೂಢ ನಡೆ ಈ ಬೆಳವಣಿಗೆಗೆ ಪುಷ್ಠಿ ನೀಡಿದೆ.
ಬ್ಯಾಂಕಿನ ಅಧಿಕಾರ ಹಿಡಿಯಲು ಪಕ್ಷಕ್ಕೆ ಮುಜುಗರ ತರುವ ಕೆಲಸ ಮಾಡಬೇಡಿ ಎಂದು ಬಿಜೆಪಿ ವರಿಷ್ಠರು ಹಾಗೂ ಆರ್‌ಎಸ್‍ಎಸ್ ನಾಯಕರು ಮೊದಲೇ ಖಡಕ್ ಸೂಚನೆ ನೀಡಿದ್ದರು. ಬಿಜೆಪಿ ವರಿಷ್ಠರ ಸೂಚನೆಗೆ ಮಣಿದು ಹಾವು-ಮುಂಗೂಸಿಯಂತಿದ್ದ ನಾಯಕರು ಒಂದಾಗಿದ್ದರು. ಎರಡು ವಾರಗಳ ಹಿಂದೆ ನಡೆದ ಬ್ಯಾಂಕ್ ನಿರ್ದೇಶಕರ ಚುನಾವಣೆಯಲ್ಲಿ ಒಂದಾಗಿ ಎದುರಿಸಿದ್ದ ನಾಯಕರು 13 ಸ್ಥಾನಗಳನ್ನು ಅವಿರೋಧ ಆಯ್ಕೆ ಮಾಡುವಲ್ಲಿ ಸಫಲರಾಗಿದ್ದರು.
ಬಳಿಕ ಬೆಳಗಾವಿಯ ಖಾಸಗಿ ಹೋಟೆಲಿನಲ್ಲಿ ಕುಳಿತು ಒಟ್ಟಾಗಿ ಸುದ್ದಿಗೋಷ್ಠಿ ನಡೆಸಿ, ನಮ್ಮಲ್ಲಿರುವ ವೈಮನಸ್ಸು, ಭಿನ್ನಾಭಿಪ್ರಾಯ ಮರೆತು ಒಂದಾಗಿದ್ದೇವೆ. 20 ವರ್ಷಗಳ ಕಾಲ ಒಂದಾಗಿಯೇ ಇರುತ್ತೇವೆ ಎಂದು ಹೇಳಿಕೆ ನೀಡಿದ್ದರು. ಈ ಹೇಳಿಕೆ ನೀಡಿ ಎರಡೇ ವಾರಕ್ಕೆ ನಾಯಕರ ಮಧ್ಯೆ ಭಿನ್ನರಾಗ ಶುರುವಾಗಿದ್ದು, ಮತ್ತೇ ಡಿಸಿಸಿ ಬ್ಯಾಂಕ್ ಚುನಾವಣೆ ಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟಿದೆ.
ನಾಯಕರ ನಿಗೂಢ ನಡೆ
ಜಿಲ್ಲಾ ರಾಜಕಾರಣದಲ್ಲಿ ಕತ್ತಿ, ಸವದಿ ಹಾಗೂ ಜಾರಕಿಹೊಳಿ ಕುಟುಂಬ ತನ್ನದೇ ಪ್ರಭಾವ ಹೊಂದಿದೆ. ಬಿಡಿಸಿಸಿ ಹಾಲಿ ಅಧ್ಯಕ್ಷ ರಮೇಶ ಕತ್ತಿ ಮತ್ತೊಂದು ಅವಧಿಗೆ ಅಧ್ಯಕ್ಷರಾಗುವ ಇಂಗಿತ ವ್ಯಕ್ತಪಡಿಸಿದ್ದಾರೆ. ಸಹೋದರನಿಗೆ ಪಟ್ಟ ಕಟ್ಟಲು ಶಾಸಕ ಉಮೇಶ ಕತ್ತಿ ತಂತ್ರ ಹೆಣೆಯುತ್ತಿದ್ದಾರೆ. ಡಿಸಿಎಂ ಲಕ್ಷ್ಮಣ ಸವದಿ ಕೂಡ ತಮ್ಮ ಆಪ್ತ ಹಾಗೂ ಕಿತ್ತೂರು ಶಾಸಕ ಮಹಾಂತೇಶ ದೊಡ್ಡಗೌಡರ ಅವರಿಗೆ ಪಟ್ಟ ಕಟ್ಟಲು ಯತ್ನಿಸುತ್ತಿದ್ದಾರೆ.