ಬೆಳಗಾವಿ: ಹೊಸ ವರ್ಷದ ಸ್ವಾಗತಕ್ಕೆ ಕುಂದಾನಗರಿ ಸಜ್ಜುಗೊಂಡಿದೆ. ನೂತನ ವರ್ಷವನ್ನು ಸಂಭ್ರಮದಿಂದ ಸ್ವಾಗತಿಸಲು ನಗರದ ಬಹುತೇಕ ಹೋಟೆಲ್ಗಳು ಮಧುವಣಗಿತ್ತಿಯಂತೆ ಸಿಂಗಾರಗೊಂಡಿವೆ.
ಹೊಸ ವರ್ಷದ ಸ್ವಾಗತಕ್ಕೆ ಕುಂದಾನಗರಿ ಸಜ್ಜು; ಹೋಟೆಲ್ಗಳಲ್ಲಿ ಪಾರ್ಟಿ, ಲೈವ್ ಬ್ಯಾಂಡ್! - ಹೊಸ ವರ್ಷದ ಸ್ವಾಗತಕ್ಕೆ ಬೆಳಗಾವಿ ಸಜ್ಜು
ಹೊಸ ವರ್ಷಾಚರಣೆಗೆ ಎಲ್ಲೆಡೆ ಭರದ ಸಿದ್ಧತೆ ನಡೆದಿದೆ. ಕುಂದಾನಗರಿ ಬೆಳಗಾವಿಯಲ್ಲೂ ನೂತನ ವರ್ಷಾಚರಣೆಗೆ ಜನ ತುದಿಗಾಲಿನಲ್ಲಿ ನಿಂತಿದ್ದು, ನಗರದ ಬಹುತೇಕ ಹೋಟೆಲ್ಗಳು ಕೂಡಾ ಸಂಭ್ರಮಾಚರಣೆಗೆ ಸಿಂಗಾರಗೊಂಡಿವೆ.

ನಗರದ ಸಂಕಮ್, ಯುಕೆ-27, ಮೇರಿಯಟ್ ಹೋಟೆಲ್ಗಳಲ್ಲಿ ಗ್ರಾಹಕರಿಗಾಗಿ ನೃತ್ಯ, ಪಾರ್ಟಿ ವ್ಯವಸ್ಥೆ, ಲೈವ್ ಬ್ಯಾಂಡ್, ಸಂಗೀತ ಕಾರ್ಯಕ್ರಮ ಆಯೋಜಿಸಿವೆ. ಪ್ರೇಮಿಗಳು ಹಾಗೂ ಯುವಕ-ಯುವತಿಯರು ಹೊಸ ವರ್ಷದ ಸ್ವಾಗತಕ್ಕೆ ಕಾತರರಾಗಿದ್ದಾರೆ. ಮಧ್ಯರಾತ್ರಿ ಒಂದರವರೆಗೆ ನಗರದ ಎಲ್ಲ ಬಾರ್ ಹಾಗೂ ಹೋಟೆಲ್ಗಳು ಕಾರ್ಯನಿರ್ವಹಿಸಲಿವೆ. ರಾತ್ರಿ 12ಕ್ಕೆ ಓಲ್ಡ್ ಮ್ಯಾನ್ ಪ್ರತಿಕೃತಿಗೆ ಅಗ್ನಿ ಸ್ಪರ್ಶ ಮಾಡಿ ಹೊಸ ವರ್ಷ ಸ್ವಾಗತಿಸುವುದು ಇಲ್ಲಿನ ಸಂಪ್ರದಾಯ. ಹೀಗಾಗಿ ನಗರದಲ್ಲಿ ಪ್ರತಿ ಗಲ್ಲಿಯಲ್ಲಿ ಓಲ್ಡ್ ಮ್ಯಾನ್ ಪ್ರತಿಕೃತಿ ದಹಿಸಲಾಗುತ್ತದೆ.
ಅತ್ಯಾಚಾರಿಗೆ ಗಲ್ಲು ಶಿಕ್ಷೆ ವಿಧಿಸಬೇಕು ಎಂಬ ಸಂದೇಶ ಸಾರುವ ಓಲ್ಡ್ ಮ್ಯಾನ್ ಪ್ರತಿಕೃತಿಯನ್ನು, ಕ್ಯಾಂಪ್ ಪ್ರದೇಶದಲ್ಲಿ ನಿರ್ಮಿಸಲಾಗಿದೆ. ಪ್ರತಿ ಓಲ್ಡ್ ಮ್ಯಾನ್ ಪ್ರತಿಕೃತಿ ಬಳಿ ಓರ್ವ ಪೊಲೀಸ್ ಪೇದೆಯನ್ನು ಭದ್ರತೆಗೆ ನಿಯೋಜನೆಗೊಳಿಸಲಾಗಿದೆ. ನಗರ ಪೊಲೀಸ್ ಆಯುಕ್ತ ಲೋಕೇಶಕುಮಾರ್ ನೇತೃತ್ವದಲ್ಲಿ 1500ಕ್ಕೂ ಅಧಿಕ ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿದೆ. ಶಾಂತಿಯುತವಾಗಿ ಹೊಸವರ್ಷ ಸ್ವಾಗತಿಸಲು ಪೊಲೀಸರು ಅನುಕೂಲ ಮಾಡಿಕೊಟ್ಟಿದ್ದಾರೆ. ರಾತ್ರಿ ಒಂದೂವರೆ ನಂತರ ಮನೆ ಸೇರುವಂತೆಯೂ ಪೊಲೀಸರು ಮನವಿ ಮಾಡಿದ್ದಾರೆ.