ಬೆಳಗಾವಿ:ಮೆದುಳು ಜ್ವರದಿಂದ ಸಾವು ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದ 8 ವರ್ಷದ ಬಾಲಕನ್ನು ಬೆಳಗಾವಿಯ ಯಶ್ ಆಸ್ಪತ್ರೆಗೆ ಕರೆತರಲಾಗಿದೆ. 'ಈಟಿವಿ ಭಾರತ'ದಲ್ಲಿ 'ಬೆಳಗಾವಿ:ಕೋಮಾದಲ್ಲಿರುವ ಮಗನ ಪ್ರಾಣ ಉಳಿಸಲು ದೇವರ ಮೊರೆ ಹೋದ ತಾಯಿ' ಎಂಬ ಶೀರ್ಷಿಕೆಯಡಿ ಮಂಗಳವಾರ ಸುದ್ದಿ ಪ್ರಕಟಿಸಲಾಗಿತ್ತು. ಈ ಸುದ್ದಿಗೆ ಸ್ಪಂದಿಸಿದ ಬೆಳಗಾವಿ ಫೇಸ್‌ಬುಕ್ ಫ್ರೆಂಡ್ಸ್ ಸರ್ಕಲ್ ತಂಡದವರು ಬಾಲಕನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸಾ ವೆಚ್ಚವನ್ನು ಭರಿಸಲು ನಿರ್ಧರಿಸಿದ್ದು, ನಗರದ ಯಶ್ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನ ಅಂಬರಡಾ ಗ್ರಾಮದ ಶೈಲೇಶ್ ಕೃಷ್ಣಾ ಸೂತ್ರವಿ ಎಂಬ 8 ವರ್ಷದ ಬಾಲಕ ಮೆದುಳು ಜ್ವರ ಬಂದು ಕೋಮಾದಲ್ಲಿದ್ದಾನೆ. ಮಗನ ಪ್ರಾಣ ಉಳಿಸುವಂತೆ ಬಾಲಕನ ತಾಯಿ ಖಾನಾಪೂರ ತಾಲೂಕಿನ ನಂದಗಡ ಗ್ರಾಮದಲ್ಲಿರುವ ಪ್ರಸಿದ್ಧ ಕ್ರೈಸ್ತ ಪ್ರಾರ್ಥನಾ ಮಂದಿರಕ್ಕೆ ಕರೆದೊಯ್ದು ಪ್ರಾರ್ಥಿಸಿದ್ದಾರೆ. ಇದೀಗ ಕೋಮಾದಲ್ಲಿದ್ದ ಬಾಲಕನನ್ನು ಖಾನಾಪೂರ ತಾಲೂಕಿನ ನಂದಗಡ ಗ್ರಾಮದಿಂದ ಬೆಳಗಾವಿಯ ಯಶ್ ಆಸ್ಪತ್ರೆಗೆ ಆ್ಯಂಬುಲೆನ್ಸ್ ಮೂಲಕ ಕರೆದುಕೊಂಡು ಬರಲಾಗಿದೆ. ಯಶ್ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ. ಎಸ್.ಕೆ. ಪಾಟೀಲ ಅವರಿಂದ ಚಿಕಿತ್ಸೆ ಪ್ರಾರಂಭಿಸಲಾಗಿದೆ.