ಅಥಣಿ(ಬೆಳಗಾವಿ): ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಝುಂಜರವಾಡ ಗ್ರಾಮದ ಅಪ್ಪಯ್ಯ ಸ್ವಾಮಿ ಹಾಗೂ ಚಂದ್ರಯ್ಯ ಸ್ವಾಮಿ ರಥೋತ್ಸವ ಅದ್ಧೂರಿಯಾಗಿ ನೆರವೇರಿತು. ಪ್ರತಿವರ್ಷದಂತೆ ಈ ಬಾರಿಯೂ ಬುದ್ಧ ಪೌರ್ಣಿಮೆಯಂದು ಗ್ರಾಮದಲ್ಲಿ ಜಾತ್ರೆಯನ್ನು ಆಚರಿಸಲಾಯಿತು. ಮೂರು ದಿನಗಳ ಕಾಲ ನಡೆಯುವ ಅದ್ಧೂರಿ ಜಾತ್ರೆಗೆ ರಾಜ್ಯದ ಎಲ್ಲೆಡೆಗಳಿಂದ ಸಾವಿರಾರು ಭಕ್ತರು ಆಗಮಿಸಿದ್ದರು.
ಕಳೆದ ಎರಡು ವರ್ಷಗಳಿಂದ ಕೊರೊನಾ ಕಾರಣದಿಂದಾಗಿ ಕಳೆಗುಂದಿದ್ದ ತ್ರಿಕಾಲ ಜ್ಞಾನಿ ಹಾಗೂ ಪವಾಡ ಪುರುಷ ಅಪ್ಪಯ್ಯಸ್ವಾಮಿ ಹಾಗೂ ಚಂದ್ರಯ್ಯ ಸ್ವಾಮಿ ಜಾತ್ರೆ ಈ ಬಾರಿ ವಿಜೃಂಭಣೆಯಿಂದ ಜರುಗಿತು. ಪರಂಪರಾಗತವಾಗಿ ನಡೆದುಕೊಂಡು ಬರುತ್ತಿರುವ ಈ ಜಾತ್ರೆಯಲ್ಲಿ ಮಠದ ಪೀಠಾಧಿಪತಿಗಳಿಗೆ ಪಾವಿತ್ರ್ಯತೆಯ ಗೌರವವನ್ನು ಸಾವಿರಾರು ಭಕ್ತರಿಂದ ಸಲ್ಲಿಸಲಾಯಿತು. ರಥೋತ್ಸವದ ವೇಳೆ ಮಠದ ಪೀಠಾಧಿಪತಿಗಳನ್ನು ನೆಲದಲ್ಲಿ ನಡೆಸದೇ ಭಕ್ತರೇ ತಮ್ಮ ಹೆಗಲ ಮೇಲೆ ಹೊತ್ತು ಸಾಗುವುದು ಇಲ್ಲಿನ ವಾಡಿಕೆಯಾಗಿದೆ.