ಬೆಳಗಾವಿ: ಕೊರೊನಾ ಆತಂಕದ ಮಧ್ಯೆಯೂ ಕೋವಿಡ್-19 ಮಾರ್ಗಸೂಚಿಗಳನ್ನು ಅನುಸರಿಸಿ ಕ್ರಿಸ್‌ಮಸ್ ಆಚರಣೆಗೆ ಸರ್ಕಾರ ಅವಕಾಶ ಕಲ್ಪಿಸಿದ್ದು, ಕುಂದಾನಗರಿಯ ಪ್ರಮುಖ ಚರ್ಚ್ಗಳು ಮದುವಣಗಿತ್ತಿಯಂತೆ ಸಿಂಗಾರಗೊಂಡಿವೆ.
ಎಲ್ಲರ ಗಮನ ಸೆಳೆಯುತ್ತಿರುವ ಕುಂದಾನಗರಿ ಚರ್ಚ್ಗಳು.. ಕ್ರಿಸ್‌ಮಸ್ ಹಿನ್ನೆಲೆ ಬೆಳಗಾವಿಯ ಪ್ರಮುಖ ಚರ್ಚ್ಗಳಲ್ಲಿ ಬಣ್ಣ ಬಣ್ಣದ ಅಲಂಕಾರ, ಗೊಂಬೆಗಳ ಜೋಡಣೆ ಹಾಗೂ ಜಗಮಗಿಸುವ ಲೈಟ್ಗಳ ಅಲಂಕಾರ ಎಲ್ಲರ ಗಮನ ಸೆಳೆಯುತ್ತಿದೆ. ಈ ಹಿನ್ನೆಲೆ ಕ್ರೈಸ್ತ ಬಾಂಧವರು ಸೇರಿದಂತೆ ಇತರೆ ಸಮುದಾಯದವರು ಚರ್ಚ್ಗಳತ್ತ ಆಗಮಿಸಿ ಫೋಟೋ ಕ್ಲಿಕ್ಕಿಸಿಕೊಂಡು ಸಂತಸ ವ್ಯಕ್ತಪಡಿಸುತ್ತಿದ್ದಾರೆ.
ಕೊರೊನಾ ಹಿನ್ನೆಲೆ ಕ್ರಿಸ್‌ಮಸ್ ಸರಳವಾಗಿ ಆಚರಣೆ ಮಾಡುವಂತೆ ರಾಜ್ಯ ಸರ್ಕಾರ ಸೂಚನೆ ನೀಡಿದ್ದು, ಚರ್ಚ್ಗಳಲ್ಲಿ ಕೊರೊನಾ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ. ಸಾಮಾಜಿಕ ಅಂತರ, ಸ್ಯಾನಿಟೈಸರ್ ಸೇರಿದಂತೆ ಎಲ್ಲಾ ವ್ಯವಸ್ಥೆ ಮಾಡಿಕೊಳ್ಳಲಾಗಿದೆ.
ಕ್ರಿಸ್‌ಮಸ್ ಹಬ್ಬದ ಪ್ರಯುಕ್ತ ಚರ್ಚ್ಗಳಲ್ಲಿ ಕ್ರೈಸ್ತ ಬಾಂಧವರು ಸಾಮೂಹಿಕ ಪ್ರಾರ್ಥನೆ ಸಲ್ಲಿಸುವ ಮೂಲಕ ಒಬ್ಬರಿಗೊಬ್ಬರು ಶುಭಾಶಯಗಳನ್ನು ವಿನಿಮಯ ಮಾಡಿಕೊಂಡು ಸಾಮೂಹಿಕ ಪ್ರಾರ್ಥನೆಯಲ್ಲಿ ತೊಡಗಿಸಿಕೊಳ್ಳುತ್ತಾರೆ. ಇದರಿಂದಾಗಿ ಕೊರೊನಾ ಹೆಚ್ಚಾಗುವ ಭೀತಿ ಹಿನ್ನೆಲೆ ಈ ವರ್ಷ ಕ್ರಿಸ್‌ಮಸ್ ಆಚರಣೆಯನ್ನು ಮನೆಯಲ್ಲಿಯೇ ಮಾಡಬೇಕೆಂದು ಸರ್ಕಾರ ಮನವಿ ಮಾಡಿಕೊಂಡಿದೆ.