ಬೆಳಗಾವಿ: ಭಿಕ್ಷಾಟನೆಯಲ್ಲಿ ಮಕ್ಕಳನ್ನು ಬಳಸಿಕೊಳ್ಳುವ ದಂಧೆ ನಡೆಯುತ್ತಿದೆ ಎನ್ನುವುದನ್ನು ಸರ್ಕಾರ ಒಪ್ಪಿಕೊಂಡಿದ್ದು, ಬೆಳಗಾವಿ ಅಧಿವೇಶನ ಮುಗಿದ ಒಂದು ವಾರದಲ್ಲಿ ಸಂಬಂಧಪಟ್ಟ ಇಲಾಖೆಗಳ ಜೊತೆ ಸಭೆ ನಡೆಸಿ ಭಿಕ್ಷಾಟನೆ ನಿರ್ಮೂಲನೆ ಮಾಡಲು ಬಿಗಿಯಾದ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸಭಾ ನಾಯಕ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.
ಮಕ್ಕಳ ಬಳಸಿ ಭಿಕ್ಷಾಟನೆ: ಬಿಗಿ ಕ್ರಮ ಕೈಗೊಳ್ಳುವುದಾಗಿ ಪರಿಷತ್‌ಗೆ ಸರ್ಕಾರ ಸ್ಪಷ್ಟನೆ ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಕಾಂಗ್ರೆಸ್ ಸದಸ್ಯ ಗೋವಿಂದ ರಾಜ್ ಪ್ರಶ್ನೆಗೆ ಉತ್ತರಿಸಿದ ಸಭಾ ನಾಯಕ ಕೋಟ ಶ್ರೀನಿವಾಸ ಪೂಜಾರಿ, ಭಿಕ್ಷಾಟನೆ ತಡೆಗೆ ಕ್ರಮ ಕೈಗೊಳ್ಳುವುದು ಗೃಹ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಮತ್ತು ಸಮಾಜ ಕಲ್ಯಾಣ ಇಲಾಖೆ ಜವಾಬ್ದಾರಿ. ಮಕ್ಕಳ ಭಿಕ್ಷಾಟನೆ ತಡೆಗೆ ಈಗಾಗಲೇ ಸಾಕಷ್ಟು ಕ್ರಮ ಕೈಗೊಳ್ಳಲಾಗಿದೆ.
ರಾಜ್ಯದ 14 ಜಿಲ್ಲೆಗಳಲ್ಲಿ ಭಿಕ್ಷಾಟನೆ ಪುನರ್ವಸತಿ ಕೇಂದ್ರ ಇದೆ, 4 ಜಿಲ್ಲೆಗಳಿಗೆ ಹೊಸದಾಗಿ ಪುನರ್ವಸತಿ ಕೇಂದ್ರ ಮಂಜೂರು ಮಾಡಿದ್ದು, ಉಳಿದ 12 ಜಿಲ್ಲೆಗಳಲ್ಲಿ ಆದಷ್ಟು ಬೇಗ ಮಂಜೂರು ಮಾಡಲಾಗುತ್ತದೆ ಎಂದು ಹೇಳಿದರು.
ಎಳೆಯ ಮಕ್ಕಳನ್ನು ಭಿಕ್ಷಾಟನೆಗೆ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಯಾರದ್ದೋ ಮಕ್ಕಳನ್ನು ತಂದು ಬೆನ್ನಿಗೆ ಕಟ್ಟಿಕೊಂಡು ಭಿಕ್ಷಾಟನೆ ಮಾಡುವ ದಂಧೆ ನಡೆಯುತ್ತಿದೆ.
ನಮ್ಮ ಮೂರು ಇಲಾಖೆಯ ಸಭೆ ನಡೆಸಿ ಭಿಕ್ಷಾಟನೆ ನಿರ್ಮೂಲನೆಗೆ ಚುರುಕು ಮುಟ್ಟಿಸುವ ಕ್ರಮ ಕೈಗೊಳ್ಳಲಾಗುತ್ತದೆ. ಮಕ್ಕಳ ಬಳಕೆ ಮಾಡಿ ಭಿಕ್ಷಾಟನೆ ಮಾಡುವುದಕ್ಕೆ ತಡೆ ಹಾಕಲಾಗುತ್ತದೆ, ಭಿಕ್ಷಾಟನೆ ಸಂಪೂರ್ಣ ನಿರ್ಮೂಲನೆ ಮಾಡಲು ಪ್ರಯತ್ನಿಸಲಾಗುತ್ತದೆ ಎಂದು ಭರವಸೆ ನೀಡಿದರು.
'ಬೇರೆಯವರ ಮಕ್ಕಳನ್ನು ಅಂಗವಿಕಲ ಮಾಡಿ ಭಿಕ್ಷಾಟನೆಗೆ ಬಳಸುತ್ತಾರೆ'
ಈ ವೇಳೆ ಮಾತನಾಡಿದ ಪ್ರತಿಪಕ್ಷ ನಾಯಕ ಎಸ್.ಆರ್.ಪಾಟೀಲ್, ಕರ್ನಾಟಕವನ್ನು ಭಿಕ್ಷಾಟನೆ ಮುಕ್ತ ರಾಜ್ಯ ಎನ್ನುವ ರೀತಿ ಮಾಡಬೇಕು. ಭಿಕ್ಷಾಟನೆ ಬ್ಯಾನ್ ಮಾಡಿ, ಪುನರ್ವಸತಿ ಕೇಂದ್ರ ಮಾಡಬೇಕು.
‘ಬೇರೆಯವರ ಮಕ್ಕಳನ್ನು ಅಂಗವಿಕಲ ಮಾಡಿ ಭಿಕ್ಷಾಟನೆ ಮಾಡಲು ಬಳಸುತ್ತಾರೆ, ಇದು ಹೃದಯ ವಿದ್ರಾವಕ ಘಟನೆ. ಹಾಗಾಗಿ ಭಿಕ್ಷಾಟನೆ ಮುಕ್ತವನ್ನಾಗಿ ಮಾಡಿ ಮಕ್ಕಳನ್ನು ಪುನರ್ವಸತಿ ಕೇಂದ್ರಕ್ಕೆ ಸೇರಿಸಿ ಎಂದು ಆಗ್ರಹಿಸಿದರು.
ಇದಕ್ಕೆ ಉತ್ತರಿಸಿದ ಕೋಟ ಶ್ರೀನಿವಾಸ ಪೂಜಾರಿ, ಸದನ ಮುಗಿದ ಒಂದು ವಾರದಲ್ಲಿ ಸಂಬಂಧಪಟ್ಟ ಇಲಾಖೆಗಳ ಜೊತೆ ಸಭೆ ನಡೆಸಿ ಭಿಕ್ಷಾಟಣೆ ನಿರ್ಮೂಲನೆಗೆ ಬಿಗಿಯಾದ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ನಾರಾಯಣಸ್ವಾಮಿಗೆ ಸಾವಿರ ಪುಟಗಳ ಉತ್ತರ:
ಪರಿಶಿಷ್ಟ ಜಾತಿ ಮತ್ತು ಪಂಗಡದ ಬಡವರಿಗೆ ಭೂ ಮಾಲೀಕತ್ವ ನೀಡುವ ವಿಚಾರದಲ್ಲಿ ಸರ್ಕಾರ ಅಗತ್ಯ ಕ್ರಮ ಕೈಗೊಂಡಿದ್ದು ತಪ್ಪು ಮಾಹಿತಿ ನೀಡಿ ಅನರ್ಹರು ಯೋಜನೆಯ ದುರ್ಲಾಭ ಪಡೆದುಕೊಂಡಿದ್ದರೆ ಅಂತಹವರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಲಾಗುತ್ತದೆ ಎಂದು ಸಭಾ ನಾಯಕ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.
ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿ ಸದಸ್ಯ ವೈ.ಎನಾರಾಯಣಸ್ವಾಮಿ ಪ್ರಶ್ನೆಗೆ ಕೋಟ ಶ್ರೀನಿವಾಸ ಪೂಜಾರಿ ಸುದೀರ್ಘ ಲಿಖಿತ ಉತ್ತರ ನೀಡಿದರು. ಸಾವಿರ ಪುಟದ ಉತ್ತರ ಕೊಟ್ಟರೆ ನಾವು ಹೇಗೆ ಓದಿ ಉಪ ಪ್ರಶ್ನೆ ಕೇಳಲು ಸಾಧ್ಯ?.
ಇಂತಹ ಉತ್ತರ ಇದ್ದಾಗ ಒಂದು ದಿನ ಮೊದಲೇ ಕೊಡಿ ಎಂದು ಸದಸ್ಯ ನಾರಾಯಣಸ್ವಾಮಿ ಮನವಿ ಮಾಡಿದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸಚಿವ ಈಶ್ವರಪ್ಪ, ಒಂದು ದಿನ ಮೊದಲು ಉತ್ತರ ಕೊಡಲು ಸಾಧ್ಯವಿಲ್ಲ. ಹೊಸ ಸಂಪ್ರದಾಯ ಹುಟ್ಟುಹಾಕಲು ಆಗಲ್ಲ ಎಂದರು.
ಸಭಾಪತಿಗಳು ಕೂಡ ಈಶ್ವರಪ್ಪ ಮಾತಿಗೆ ಸಹಮತ ವ್ಯಕ್ತಪಡಿಸಿ ಸಮಗ್ರ ಉತ್ತರ ನೀಡಿದ್ದಾರೆ. ಇನ್ನೇನಾದರೂ ಕೇಳುವುದಿದ್ದರೆ ಕೇಳಿ ಎಂದರು. ನಂತರ ಯೋಜನೆ ದುರ್ಬಳಕೆ ತಡೆ ಕುರಿತು ಪ್ರಸ್ತಾಪಿಸಿ ಸರ್ಕಾರದಿಂದ ಅಗತ್ಯ ಕ್ರಮದ ಅಪೇಕ್ಷೆ ವ್ಯಕ್ತಪಡಿಸಿದರು.
ಇದಕ್ಕೆ ಉತ್ತರಿಸಿದ ಸಭಾ ನಾಯಕ ಕೋಟ ಶ್ರೀನಿವಾಸ ಪೂಜಾರಿ, ಯೋಜನೆ ದುರ್ಲಾಭ ಪಡೆದುಕೊಂಡಿದ್ದರೆ ಮುಲಾಜಿಲ್ಲದೇ ಕ್ರಮ ಕೈಗೊಳ್ಳುತ್ತೇವೆ. ಅನರ್ಹರು ಭೂಮಿ ಪಡೆದು ದುರ್ಬಳಕೆ ಮಾಡಿದ್ದರೆ ಅವರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಲಾಗುತ್ತದೆ.
ಇದರಲ್ಲಿ ಯಾರನ್ನೂ ರಕ್ಷಿಸುವ ಪ್ರಶ್ನೆಯೇ ಇಲ್ಲ. ಬಹಳ ಗಟ್ಟಿಯಾಗಿ ಎಸ್ಸಿ ಎಸ್ಟಿ ಸಮುದಾಯದ ಬಡವರಿಗೆ ಭೂ ಒಡೆತನ ನೀಡುವ ಯೋಜನೆ ಅನುಷ್ಠಾನ ಮಾಡುತ್ತೇವೆ ಎಂದರು.
ಇದನ್ನೂ ಓದಿ:ಸಿದ್ದರಾಮಯ್ಯ ಮಂಡಿಸಿದ ನಿಲುವಳಿ ಸೂಚನೆ ತಿರಸ್ಕರಿಸಿದ ಸ್ಪೀಕರ್: ಸದನದಲ್ಲಿ ಆಡಳಿತ - ಪ್ರತಿಪಕ್ಷದ ಸದಸ್ಯರ ನಡುವೆ ವಾಕ್ಸಮರ