ಚಿಕ್ಕೋಡಿ: ರೈತರೊಂದಿಗೊಂದು ದಿನ ಕಾರ್ಯಕ್ರಮಕ್ಕೆ ಚಾಲನೆ ನೀಡಲು ನಿಪ್ಪಾಣಿ ತಾಲೂಕಿನ ಭೀವಶಿ ಗ್ರಾಮಕ್ಕೆ ಆಗಮಿಸಿದ ಕೃಷಿ ಸಚಿವ ಬಿ.ಸಿ. ಪಾಟೀಲ್ಗೆ ಕುಂಭಮೇಳ ಮತ್ತು ವಿವಿಧ ಜಾನಪದ ಕಲಾತಂಡಗಳಿಂದ ಅದ್ಧೂರಿ ಸ್ವಾಗತ ಕೋರಲಾಯಿತು. ಈ ವೇಳೆ, ಭೀವಶಿ ಗ್ರಾಮದ ಕಳೋಬಾ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ದೇವರ ಆಶೀರ್ವಾದ ಪಡೆದುಕೊಂಡರು.
ಬಳಿಕ ಎತ್ತಿನ ಬಂಡಿಯ ಮೇಲೆ ನಿಂತು ದೇವಸ್ಥಾನ ಆವರಣದಿಂದ ಗ್ರಾಮದ ಹೊರವಲಯದಲ್ಲಿರುವ ನರಸಿಂಹ ಚೌಗುಲೆ ಅವರ ಕೃಷಿಭೂಮಿಗೆ ಎತ್ತಿನ ಬಂಡಿಯಲ್ಲಿ ಹೋಗುವ ಮೂಲಕ ಹೋಗಿ ಸಚಿವರು ಕಬ್ಬಿನ ನಾಟಿ ಮಾಡಿದರು.
ರೈತರೊಂದಿಗೆ ಒಂದು ದಿನ ಕಾರ್ಯಕ್ರಮಕ್ಕೆ ಸಚಿವ ಬಿ.ಸಿ ಪಾಟೀಲ್ ಚಾಲನೆ ಇದಾದ ನಂತರ ರೈತರೊಂದಿಗೆ ನಡೆದ ಸಂವಾದ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ವಿವಿಧ ಜಾನಪದ ಕಲಾತಂಡಗಳು, ಮುತ್ತೈದೆಯರ ಕುಂಭಮೇಳ ಮೆರವಣಿಗೆಯ ಕಳೆ ಹೆಚ್ಚಿಸಿದವು. ಸಚಿವೆ ಶಶಿಕಲಾ ಜೊಲ್ಲೆ, ಸಂಸದ ಅಣ್ಣಾಸಾಹೇಬ್ ಜೊಲ್ಲೆ ಇತರರು ಸಚಿವರಿಗೆ ಸಾಥ್ ನೀಡಿದರು.
ಇದನ್ನೂ ಓದಿ:ಇಂದಿನಿಂದ ಸವದತ್ತಿ ಯಲ್ಲಮ್ಮ ದೇವಿ ದರ್ಶನಕ್ಕೆ ಅವಕಾಶ..
ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರೈತರು ಸಮಸ್ಯೆಗಳನ್ನು ಹೊತ್ತು ಸರ್ಕಾರದ ಮುಂದೆ ಹೋಗಬಾರದು. ಸರ್ಕಾರವೇ ರೈತರ ಬಳಿಗೆ ಹೋಗಬೇಕು ಎಂಬ ನಿಟ್ಟಿನಲ್ಲಿ ರೈತರೊಂದಿಗೊಂದು ದಿನ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಇಡೀ ದಿನ ರೈತರ ಸಮಸ್ಯೆಗಳನ್ನು ಆಲಿಸುವ ಉದ್ದೇಶ ಕಾರ್ಯಕ್ರಮದ್ದಾಗಿದ್ದು, ರೈತರು, ರೈತ ಮಕ್ಕಳೊಂದಿಗೆ ಸಂವಾದ ನಡೆಸಲಾಗುತ್ತಿದೆ ಎಂದರು. ನೆರೆ ಸಂತ್ರಸ್ತರ ಬಗ್ಗೆ ಈಗಾಗಲೇ ಸರ್ವೇ ಮಾಡಿಸಲಾಗಿದೆ. ಸರ್ವೇ ಕಾರ್ಯ ಮುಗಿದ ಮೇಲೆ ಪರಿಹಾರ ವಿತರಣೆ ಮಾಡಲಾಗಿದೆ ಎಂದರು.
ಎಂಎಸ್ಪಿ ದರ ಹೆಚ್ಚಿಸಲು ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು:
ರೈತರು ಬೆಳೆದ ಬೆಳೆಗೆ ಸೂಕ್ತ ಬೆಲೆ ಸಿಗುವಂತಾಗಬೇಕು. ಆ ನಿಟ್ಟಿನಲ್ಲಿ ಈಗಿರುವ ಎಂಎಸ್ಪಿ ದರವನ್ನು ಹೆಚ್ಚಿಸಲು ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಲಾಗುತ್ತದೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ ಹೇಳಿದರು.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರೈತರು ಬೆಳೆದ ಬೆಳೆಗೆ ಸರಿಯಾದ ಬೆಲೆ ಸಿಗುವ ನಿಟ್ಟಿನಲ್ಲಿ ಸರ್ಕಾರ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದೆ. ಸೋಯಾಬಿನ್ ಬೆಲೆ ಕುಸಿತವಾಗಿರೋ ಬಗ್ಗೆ ಸರ್ಕಾರದ ಮಟ್ಟದಲ್ಲಿ ಚರ್ಚೆ ನಡೆಸಲಾಗುತ್ತಿದೆ. ಬೆಳೆಗಳ ಬೆಲೆ ದಿಢೀರ್ ಆಗಿ ಕುಸಿತ ಆಗುತ್ತಿರುವುದು ರೈತರ ಹಿತದೃಷ್ಟಿಯಿಂದ ಒಳ್ಳೆಯದಲ್ಲ. ಇದು ರೈತರಿಗೆ ಆಘಾತ ಉಂಟುಮಾಡಲಿದೆ. ಕೇಂದ್ರ ಸರ್ಕಾರ ಅನೌನ್ಸ್ ಮಾಡಿರುವ ಎಂಎಸ್ಪಿ ಕಡಿಮೆ ದರದಲ್ಲಿದೆ. ರಾಜ್ಯದ ರೈತರ ಹಿತ ಕಾಪಾಡುವ ನಿಟ್ಟಿನಲ್ಲಿ ಎಂಎಸ್ಪಿ ದರವನ್ನು ಹೆಚ್ಚಿಸಲು ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಿ ಮನವಿ ಮಾಡಿಕೊಳ್ಳಲಾಗುವುದು ಎಂದರು.
ಜಿಲ್ಲೆಯಲ್ಲಿ ಈಗಾಗಲೇ ರೈತರಿಗೆ 30 ಕೋಟಿ ರೂ.ಗಳ ಬೆಳೆ ಪರಿಹಾರ ಬಂದಿದೆ. ರೈತರ ಖಾತೆಗೆ ನೇರವಾಗಿ ಹಣ ಜಮಾವಣೆ ಆಗಲಿದೆ. ರಾಜ್ಯದಲ್ಲಿ ರಸಗೊಬ್ಬರದ ಯಾವುದೇ ಕೊರತೆ ಇಲ್ಲ. ಒಂದು ವೇಳೆ ರಸಗೊಬ್ಬರ ಕೊರತೆ ಕಂಡುಬಂದರೆ ತಕ್ಷಣ ಪೂರೈಕೆ ಮಾಡಲಾಗುತ್ತದೆ ಎಂದು ಹೇಳಿದರು.