ಬೆಳಗಾವಿ : ಸುವರ್ಣ ವಿಧಾನಸೌಧದ ಸಿಎಂ ಕೊಠಡಿಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಇಂದು ಆಪ್ತ ಸಮಾಲೋಚನೆ ನಡೆಸಿದ್ದಾರೆ. ವಿಧಾನಸಭೆ ಅಧಿವೇಶನದಲ್ಲಿ ಪಾಲ್ಗೊಳ್ಳುವ ಮುನ್ನ ಸಿಎಂ ಬೊಮ್ಮಾಯಿ ಕಚೇರಿಗೆ ಭೇಟಿ ನೀಡಿದ ಬಿಎಸ್ ಯಡಿಯೂರಪ್ಪ ಕೆಲಕಾಲ ಸಮಾಲೋಚನೆ ನಡೆಸಿದ್ದಾರೆ.
ಮೊದಲನೇ ವಾರವಿಡೀ ಕಾಂಗ್ರೆಸ್ ನಡೆಸಿದ ಹೋರಾಟಗಳು, ಉಭಯ ಸದನಗಳಲ್ಲಿ ಸರ್ಕಾರವನ್ನು ಮುಜುಗರಕ್ಕೆ ಸಿಲುಕಿಸುವ ಪ್ರಯತ್ನ, ಸದನದ ಒಳ-ಹೊರಗೆ ಪ್ರತಿಭಟನೆ ಹಾಗೂ ಹೋರಾಟಗಳು ಮತ್ತು ಧರಣಿ ನಡೆಸಿರುವುದು, ಮುಂದಿನ ವಾರ ಸರ್ಕಾರ ಉಭಯ ಸದನಗಳಲ್ಲಿ ಮಂಡಿಸಲಿರುವ ಮತಾಂತರ ನಿಷೇಧ ಕಾಯ್ದೆ ಮತ್ತು ಲವ್ ಜಿಹಾದ್ ವಿರುದ್ಧದ ತಿದ್ದುಪಡಿ ಕಾಯ್ದೆಗಳನ್ನು ಪ್ರತಿಪಕ್ಷವಾಗಿ ಕಾಂಗ್ರೆಸ್ ಯಾವ ರೀತಿ ವಿರೋಧಿಸಬಹುದು. ಇದನ್ನು ಸರ್ಕಾರದ ವತಿಯಿಂದ ಯಾವ ರೀತಿ ಎದುರಿಸಬೇಕು ಹಾಗೂ ಕಾಯ್ದೆಯನ್ನು ಪ್ರತಿಪಾದಿಸಬೇಕು ಎಂಬ ಕುರಿತು ಚರ್ಚೆ ನಡೆಸಿದ್ದಾರೆ.
ಮುಂದಿನವಾರ ಪ್ರತಿಪಕ್ಷಗಳು ಕೈಗೊಳ್ಳುವ ಹೋರಾಟ ಹಾಗೂ ಅದರ ಕಾರ್ಯ ಸ್ವರೂಪಗಳ ಕುರಿತು ಚರ್ಚಿಸಿರುವ ಉದಯ ನಾಯಕರು ಸರ್ಕಾರ ಇದನ್ನು ಸಮರ್ಥವಾಗಿ ಎದುರಿಸುವ ಜೊತೆಗೆ ಸ್ಪಷ್ಟೀಕರಣವನ್ನು ನೀಡಬೇಕು ಎಂಬ ವಿಚಾರವಾಗಿ ಚರ್ಚಿಸಿದರು. ಸದನದಲ್ಲಿ ಮೂಲ-ವಲಸಿಗ ಎಂಬ ಬೇಧವಿಲ್ಲದೆ ಒಗ್ಗಟ್ಟಿನಿಂದ ಪ್ರತಿಪಕ್ಷಗಳನ್ನು ಎದುರಿಸಲು ಯಡಿಯೂರಪ್ಪ ಇದೇ ಸಂದರ್ಭ ಬೊಮ್ಮಾಯಿಗೆ ಸಲಹೆ ನೀಡಿದರು. ಯಾವುದೇ ಸಚಿವ ಹಾಗೂ ಶಾಸಕರ ವಿರುದ್ಧ ವೈಯಕ್ತಿಕ ಆರೋಪ ಕೇಳಿ ಬಂದರೂ ಸಮರ್ಥನೆ ನೀಡಲು ಎಲ್ಲರಿಗೂ ಸೂಚಿಸಬೇಕು.
ಪ್ರತಿಯೊಬ್ಬರೂ ಪಕ್ಷದ ಶಾಸಕರ ಪರವಾಗಿ ನಿಲ್ಲುವ ಕಾರ್ಯ ಮಾಡಬೇಕು. ಇಂದು ಕಾಂಗ್ರೆಸ್ ನಾಯಕರು ವಿಧಾನಸಭೆಯಲ್ಲಿ ಸಚಿವ ಭೈರತಿ ಬಸವರಾಜ್ ವಿರುದ್ಧ ನಿಲುವಳಿ ಸೂಚನೆ ಮಂಡಿಸಿದೆ. ಆಗ ಪಕ್ಷ ಭೈರತಿ ಬಸವರಾಜ ಅವರ ಪರವಾಗಿ ನಿಲ್ಲಬೇಕು. ಎಲ್ಲಾ ಶಾಸಕರಿಗೂ ಮುಖ್ಯ ಸಚೇತಕರ ಮೂಲಕ ಸಂದೇಶ ರವಾನೆ ಮಾಡಿಸಿ. ಯಾವುದೇ ರೀತಿಯಲ್ಲೂ ಪಕ್ಷದ ಸಚಿವರಿಗೆ ಅಥವಾ ಶಾಸಕರಿಗೆ ಹಾಗೂ ಪಕ್ಷಕ್ಕೆ ಮುಜುಗರ ಆಗುವ ಸ್ಥಿತಿ ಎದುರಾಗಬಾರದು ಎಂದು ಬೊಮ್ಮಾಯಿಗೆ ಬಿಎಸ್ವೈ ಸಲಹೆ ನೀಡಿದ್ದಾರೆ.
ಈ ಮಾತುಕತೆಗೂ ಮುನ್ನ ಬಿಎಸ್ವೈ ಅವರನ್ನು ಬೆಳಗಾವಿಯಲ್ಲಿ ಸಚಿವ ಭೈರತಿ ಬಸವರಾಜ್ ಭೇಟಿಯಾಗಿ ಚರ್ಚಿಸಿದರು. ಇವರ ಜೊತೆಗೆ ಸಚಿವ ಮುನಿರತ್ನ ಸಹ ಇದ್ದರು. ಇಬ್ಬರೂ ನಾಯಕರು ವಿಧಾನಸಭೆಯಲ್ಲಿ ಕಾಂಗ್ರೆಸ್ ಪಕ್ಷ ಕೆ.ಆರ್ ಪುರದ ಜಮೀನು ವಿವಾದ ವಿಚಾರವಾಗಿ ಪ್ರಸ್ತಾಪಿಸುವ ಸಾಧ್ಯತೆ ಬಗ್ಗೆ ಮಾತುಕತೆ ನಡೆಸಿದ್ದಾರೆ. ಆರೋಗ್ಯ ಸಚಿವ ಡಾ. ಸುಧಾಕರ್ ನಿನ್ನೆಯೇ ಸಿದ್ದರಾಮಯ್ಯ ಅವರನ್ನು ಮನವೊಲಿಸುವ ಪ್ರಯತ್ನ ಮಾಡಿದ್ದು, ಅದು ಫಲ ಕೊಟ್ಟಿಲ್ಲ. ಈ ಹಿನ್ನೆಲೆ ಪಕ್ಷದ ಎಲ್ಲಾ ಶಾಸಕರು ತಮ್ಮ ಪರವಾಗಿ ನಿಲ್ಲುವಂತೆ ಸೂಚಿಸಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.
ಪರಿಷತ್ತಿನಲ್ಲಿ ಗದ್ದಲ :ಸಚಿವ ಭೈರತಿ ಬಸವರಾಜ ವಿರುದ್ಧ ಭೂ ಕಬಳಿಕೆ ಆರೋಪ ಪ್ರಕರಣ ಹಾಗೂ ಸಚಿವರ ರಾಜೀನಾಮೆಗೆ ಒತ್ತಾಯವು ಎರಡು ದಿನ ಹಿಂದೆ ವಿಧಾನ ಪರಿಷತ್‌ನಲ್ಲಿ ಪ್ರಸ್ತಾಪವಾಗಿ ದೊಡ್ಡ ಗದ್ದಲವನ್ನೇ ಸೃಷ್ಟಿಸಿತ್ತು. ಸಭಾಪತಿ ಬಸವರಾಜ್ ಹೊರಟ್ಟಿ 14 ಕಾಂಗ್ರೆಸ್ ಶಾಸಕರನ್ನು ಒಂದು ದಿನದ ಮಟ್ಟಿಗೆ ಅಮಾನತುಗೊಳಿಸಿದ್ದರು. ನಿನ್ನೆ ಬೆಳಗ್ಗೆ ಪ್ರತಿಪಕ್ಷ ನಾಯಕರ ಮನವೊಲಿಸುವಲ್ಲಿ ಸಫಲರಾಗಿದ್ದರು.
ಹೊರಟ್ಟಿ ಮಧ್ಯಾಹ್ನದ ನಂತರ ಕಲಾಪ ಸುಗಮವಾಗಿ ಸಾಗುವಂತೆ ಮಾಡಿದ್ದರು. ಮಹತ್ವದ ವಿಚಾರಗಳ ಚರ್ಚೆ ಇರುವ ಹಿನ್ನೆಲೆ ತಾವು ಧರಣಿ ಹಿಂಪಡೆಯುವುದಾಗಿ ಪ್ರತಿಪಕ್ಷನಾಯಕ ಎಸ್ ಆರ್ ಪಾಟೀಲ್ ತಿಳಿಸಿದ್ದರು. ಇದೀಗ ಇದೇ ವಿಚಾರ ವಿಧಾನಸಭೆಯಲ್ಲೂ ಪ್ರಸ್ತಾಪಿಸಲು ಕಾಂಗ್ರೆಸ್ ಮುಂದಾಗಿದೆ. ಇಲ್ಲಿ ಶಾಸಕರನ್ನು ಹೇಗೆ ಎದುರಿಸಬೇಕು ಎಂಬ ಕುರಿತು ಸಿಎಂ ಹಾಗೂ ಮಾಜಿ ಸಿಎಂ ಸುದೀರ್ಘ ಚರ್ಚೆ ನಡೆಸಿದ್ದಾರೆ.