ಬೆಳಗಾವಿ: ಸಹೋದರ ಬಾಲಚಂದ್ರ ಜಾರಕಿಹೊಳಿ ಕೆಎಂಎಫ್ ಅಧ್ಯಕ್ಷ ಹುದ್ದೆಗೇರಿರುವುದು ಸಂತೋಷದ ವಿಚಾರವಲ್ಲ ಎಂದು ಯಮಕನಮರಡಿ ಶಾಸಕ ಸತೀಶ ಜಾರಕಿಹೊಳಿ ಅಚ್ಛರಿ ಹೇಳಿಕೆ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಮ್ಮಿಶ್ರ ಸರ್ಕಾರದ ಸಂದರ್ಭದಲ್ಲಿ ಭೀಮಾನಾಯ್ಕ್ ಅವರನ್ನು ಅಂತಿಮಗೊಳಿಸಲಾಗಿತ್ತು. ಬದಲಾದ ರಾಜಕೀಯ ಸನ್ನಿವೇಶ ಹಾಗೂ ಬಿಜೆಪಿ ನಾಯಕರ ಸಹಕಾರದಿಂದ ಬಾಲಚಂದ್ರ ಅಧ್ಯಕ್ಷರಾಗಿದ್ದಾರೆ. ಇದೇನು ಖುಷಿಯ ವಿಚಾರವಲ್ಲ. ಆದರೆ, ಬಾಲಚಂದ್ರ ಕೆಎಂಎಫ್ನಲ್ಲಿ ಉತ್ತಮ ಕೆಲಸ ಮಾಡಬೇಕು ಅಷ್ಟೇ ಎಂದು ಹೇಳಿದರು.
ಯಮಕನಮರಡಿ ಶಾಸಕ ಸತೀಶ ಜಾರಕಿಹೊಳಿ ಶಾಸಕ ಉಮೇಶ ಕತ್ತಿ ಸಚಿವ ಸ್ಥಾನ ಕೈತಪ್ಪಿದ ಬಳಿಕ ಸಾಕಷ್ಟು ಸಲ ಭೇಟಿ ಆಗಿದ್ದಾರೆ. ಇಬ್ಬರು ನಿರಂತರ ಮಾತನಾಡುತ್ತೇವೆ. ಸಚಿವ ಸ್ಥಾನ ಸಿಗದಿದ್ದರೆ ಏನಂತೆ. ಜಮೀನಿದೆ. ಕೃಷಿ ಚಟುವಟಿಕೆಯಲ್ಲಿ ತೊಡಗುತ್ತೇನೆ ಎಂದು ಹೇಳಿಕೊಂಡಿದ್ದಾರೆ. ಬಿಜೆಪಿ ಸರ್ಕಾರದಲ್ಲಿ ಸಾಕಷ್ಟು ಗೊಂದಲಗಳಿರುವ ಕಾರಣ ತುಂಬಾ ತೊಂದರೆಯಲ್ಲಿದೆ. ಒಂದು ತಿಂಗಳು ಮಾತ್ರ ಸರ್ಕಾರ ಇರಲಿದೆ ಎಂದು ಬಿಜೆಪಿ ಶಾಸಕರೇ ಹೇಳುತ್ತಿದ್ದಾರೆ. ಹೀಗಾಗಿ ಇದು ಎಷ್ಟು ದಿನ ನಡೆಯಲಿದೆ ಎಂಬುದನ್ನು ಕಾದು ನೋಡಬೇಕು. ಕಾಂಗ್ರೆಸ್ ಯಾವುದೇ ಪ್ರಯತ್ನಗಳಿಗೆ ಕೈ ಹಾಕಲ್ಲ ಎಂದು ಹೇಳಿದರು.
ಮಧ್ಯಂತರ ಚುನಾವಣೆಗೆ ಸಿದ್ದಗೊಳ್ಳುತ್ತಿದ್ದೇವೆ. ಅನರ್ಹ ಶಾಸಕ ರಮೇಶ ಜಾರಕಿಹೊಳಿ ಯಾವಾಗ ಯೂಟರ್ನ್ ಹೊಡೆಯುತ್ತಾರೆ ಹೇಳೊಕೆ ಬರಲ್ಲ. ರಮೇಶಗೆ ಜನರ ಬಗ್ಗೆ ಕಾಳಜಿ ಮೊದಲಿನಿಂದಲೂ ಕಡಿಮೆ. ಚುನಾವಣೆ ಸಮಯದಲ್ಲಿ ರಾಜಕೀಯ ಮಾಡುತ್ತಾರೆ. ನೆರೆಯಿಂದ ಜನರು ಸಂಕಷ್ಟದಲ್ಲಿದ್ದಾರೆ. ಹೀಗಾಗಿ ಜನರ ನಡುವೆ ಬರಬೇಕು. ದೆಹಲಿಯಲ್ಲಿ ರಮೇಶ ತಿಂಗಳುಗಟ್ಟಲೇ ಕುಳಿತಿರುವುದೇಕೆ ಎಂದು ಪ್ರಶ್ನಿಸಿದರು.