ಬೆಳಗಾವಿ: ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ(siddaramaiah) ಹತೋಟಿ ತಪ್ಪಿ ಮಾತನಾಡುತ್ತಿದ್ದಾರೆ ಎಂದು ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ(B S Yadiyurappa) ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿಯ ಜನಸ್ವರಾಜ್ ಯಾತ್ರೆಗೆ(jana swaraj yatra) ಜನಬರ್ಬಾದ್ ಯಾತ್ರೆ ಎಂಬ ಸಿದ್ದರಾಮಯ್ಯ ಅವರ ಟೀಕೆಗೆ ಬೆಳಗಾವಿಯಲ್ಲಿ ಬಿಎಸ್‌ವೈ ತಿರುಗೇಟು ನೀಡಿದರು. ನಿಮ್ಮ ಯೋಗ್ಯತೆಗೆ ನಿಮ್ಮ ಅಭ್ಯರ್ಥಿಗಳು ಯಾರೆಂಬುವುದನ್ನು ಈವರೆಗೆ ಫೈನಲ್ ಮಾಡಲಾಗಿಲ್ಲ. ಜನಬೆಂಬಲ ಇಲ್ಲ ಎಂಬುದು ಗೊತ್ತಾದ ಮೇಲೆ ಸಿದ್ದರಾಮಯ್ಯ ಮನಬಂದಂತೆ ಮಾತನಾಡುತ್ತಿದ್ದಾರೆ ಎಂದು ಟೀಕಿಸಿದರು.
ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ಆಕ್ರೋಶ ವ್ಯಕ್ತಪಡಿಸಿರುವುದು.. ಏಕೆ ನೀವು ಇನ್ನೂ ನಿಮ್ಮ ಅಭ್ಯರ್ಥಿಗಳನ್ನು ಫೈನಲ್ ಮಾಡಲಾಗಿಲ್ಲ. ನಿಮ್ಮ ಸ್ಥಿತಿ ಏನು? ಎಂದು ಪ್ರಶ್ನಿಸಿದರು. ಸಿದ್ದರಾಮಯ್ಯ ಹಾಗೂ ಡಿಕೆಶಿ ಮಧ್ಯದ ಭಿನ್ನಾಭಿಪ್ರಾಯದಿಂದ ಅವರ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಆಗಿಲ್ಲ. ಹೀಗಾಗಿ, ಏನು ಬೇಕೋ ಅದನ್ನು ಮಾತನಾಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಅತಿವೃಷ್ಟಿಗೆ ಬೆಳೆ ನಾಶವಾದ ವರದಿಯನ್ನು ಸರ್ಕಾರ ತಗೆದುಕೊಳ್ಳುತ್ತಿದೆ. ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರ ಈ ವರದಿ ಸಲ್ಲಿಸಲಿದೆ. ಸಕಾಲಕ್ಕೆ ಕೇಂದ್ರದ ಟೀಮ್ ಬಂದು ಸರ್ವೇ ಮಾಡಲಿದೆ. ಸಕಾಲಕ್ಕೆ ಪರಿಹಾರ ಕೊಡಿಸುವ ಕಡೆ ಗಮನ ಕೊಡುತ್ತಿದ್ದೇವೆ ಎಂದರು.
ಬಿಜೆಪಿ ಗೆಲ್ಲುವ ವಿಶ್ವಾಸವಿದೆ :25 ಸ್ಥಾನಗಳ ಪೈಕಿ 20 ಸ್ಥಾನಗಳಲ್ಲಿ ಮಾತ್ರ ನಾವು ಸ್ಪರ್ಧೆ ಮಾಡಿದ್ದೇವೆ. ಎರಡೆರಡು ಸ್ಥಾನ ಇದ್ದ ಕಡೆ ಒಬ್ಬರನ್ನೇ ಕಣಕ್ಕಿಳಿಸಿದ್ದೇವೆ. 20 ಸ್ಥಾನಗಳ ಪೈಕಿ ಕನಿಷ್ಟ 15 ಸ್ಥಾನಗಳಲ್ಲಿ ಬಿಜೆಪಿ ಗೆದ್ದು ಪರಿಷತ್‌ನಲ್ಲಿ ಬಹುಮತ ಗಳಿಸಲಿದೆ. ಯಾರ ಹಂಗಿಲ್ಲದೇ ಕೆಲಸ ಮಾಡುವಂತಹ ಅವಕಾಶ ನಮಗೆ ಸಿಗುವ ವಿಶ್ವಾಸ ಇದೆ.
ಕವಟಗಿಮಠ ಅತ್ಯಂತ ಪ್ರಾಮಾಣಿಕವಾಗಿ ವಿಧಾನ ಪರಿಷತ್‌ನಲ್ಲಿ ಕೆಲಸ ಮಾಡಿದ್ದಾರೆ. ಎಲ್ಲ ಸದಸ್ಯರು ಒಗ್ಗಟ್ಟಿನಿಂದ ಬಿಜೆಪಿಗೆ ಮತ ಹಾಕಬೇಕೆಂದು ಸಂಕಲ್ಪ ಮಾಡಿದ್ದಾರೆ ಎಂದರು.
ಅಕಾಲಿಕ ಮಳೆಗೆ ರೈತರ ಬೆಳೆ ನಾಶವಾಗಿದೆ. ಅವರಿಗೆ ಪರಿಹಾರ ಕೊಡುವ ನಿಟ್ಟಿನಲ್ಲಿ ಡಿಸಿಗಳ ಜೊತೆ ಸಿಎಂ ಸಭೆ ಮಾಡುತ್ತಿದ್ದಾರೆ. ತಕ್ಷಣವೇ ಪರಿಹಾರ ಕೊಡುವ ಕೆಲಸವನ್ನು ಮಾಡುತ್ತೇವೆ ಎಂದರು.
ಇದನ್ನೂ ಓದಿ:ಚಿಕ್ಕಬಳ್ಳಾಪುರದಲ್ಲಿ ವರುಣಾರ್ಭಟ: ಮತ್ತೆ ಕೊಚ್ಚಿ ಹೋದ ನಂದಿ ಬೆಟ್ಟದ ಮಾರ್ಗ
ಲಖನ್ ಜಾರಕಿಹೊಳಿಗೆ ಟಿಕೆಟ್ ನೀಡಬೇಕು ಎಂಬ ರಮೇಶ್ ಜಾರಕಿಹೊಳಿ ಬೇಡಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿ, ನಾನು ಅವರ ಜೊತೆ ಮಾತನಾಡುತ್ತೇನೆ. ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮಹಾಂತೇಶ ಕವಟಗಿಮಠರನ್ನು ಗೆಲ್ಲಿಸುವ ಕೆಲಸ ಮಾಡುತ್ತೇವೆ. ವಿವೇಕರಾವ್ ಪಾಟೀಲ್ ಬಿಜೆಪಿ ಸೇರ್ಪಡೆ ಬಗ್ಗೆ ನನಗೆ ಗೊತ್ತಿಲ್ಲ ಎಂದರು.