ಅಥಣಿ(ಬೆಳಗಾವಿ): ಕಳೆದ ಮೂರು ತಿಂಗಳ ಹಿಂದೆ ರಣಭೀಕರ ಕೃಷ್ಣಾ ನದಿ ಪ್ರವಾಹಕ್ಕೆ ಅಥಣಿ ತಾಲೂಕಿನ ಕೃಷ್ಣಾ ನದಿ ತೀರದಲ್ಲಿ ರೈತರ ಸಾವಿರಾರು ಹೆಕ್ಟೇರ್ ಬೆಳೆ ನಾಶವಾದರೂ ಸರ್ಕಾರದಿಂದ ನಯಾ ಪೈಸೆಯ ಪರಿಹಾರ ಬಂದಿಲ್ಲವೆಂದು ಆರೋಪಿಸಿ ಸರ್ಕಾರದ ವಿರುದ್ಧ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
3 ತಿಂಗಳ ಹಿಂದೆ ಮಹಾರಾಷ್ಟ್ರ ಪಶ್ಚಿಮ ಘಟ್ಟದಲ್ಲಿ ಸುರಿದ ಧಾರಾಕಾರ ಮಳೆಗೆ ಕೃಷ್ಣಾ ನದಿಯಲ್ಲಿ ಪ್ರವಾಹ ಎದುರಾಗಿ ಅಥಣಿ ತಾಲೂಕಿನ 14 ಗ್ರಾಮಗಳು ಪ್ರವಾಹಕ್ಕೆ ಸಿಲುಕಿದವು. ರೈತರು ಬೆಳೆದ ಬೆಳೆ ನೀರಿನಲ್ಲಿ ಕೊಳೆತು ಲಕ್ಷಾಂತರ ರೂಪಾಯಿ ಹಾನಿ ಸಂಭವಿಸಿತ್ತು. ಸರ್ಕಾರ ರೈತರಿಗೆ ನಷ್ಟ ಸರಿ ಹೊಂದಿಸಲು ಪ್ರತಿ ಎಕರೆ ಜಮೀನಿಗೆ 13,300 ರೂಪಾಯಿ ಪರಿಹಾರ ಹಣ ಘೋಷಿಸಿತ್ತು. ಆದ್ರೆ ಅಧಿಕಾರಿಗಳ ಹಾಗೂ ಜನಪ್ರತಿನಿಧಿಗಳ ಇಚ್ಛಾ ಶಕ್ತಿಯ ಕೊರತೆಯಿಂದ ಈವರೆಗೂ ತಾಲೂಕಿನ ನೆರೆ ಸಂತ್ರಸ್ತರ ರೈತರಿಗೆ ಬೆಳೆ ಹಾನಿ ಪರಿಹಾರ ತಲುಪದೇ ಇರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.
ನೆರೆಯಿಂದ ಹಾಳಾದ ಬೆಳೆಯನ್ನು ಜಮೀನಿನಿಂದ ತೆಗೆದು ಬೇರೆ ಬೆಳೆಯನ್ನು ಬೆಳೆಯಲು ಹಣಕಾಸಿನ ತೊಂದರೆ ಉಂಟಾಗಿದ್ದು, ಸರ್ಕಾರದ ಪರಿಹಾರ ಹಣಕ್ಕಾಗಿ ಅನ್ನದಾತರು ಕಾಯುತ್ತಿದ್ದಾರೆ. ಅಥಣಿ ಭಾಗದಲ್ಲಿ ಹೆಚ್ಚಾಗಿ ಕಬ್ಬು ಬೆಳೆಗಾರರು ಇರುವುದರಿಂದ ಪ್ರವಾಹದಿಂದ ಈ ಹಂಗಾಮಿಗೆ ಕಬ್ಬು ಇಲ್ಲದೇ ಭಾರಿ ಪ್ರಮಾಣದ ನಷ್ಟ ಸಂಭವಿಸಿದೆ.