ಬೆಳಗಾವಿ: 2021-22ನೇ ಸಾಲಿನ 3574.67 ಕೋಟಿ ರೂಪಾಯಿಗಳ ಪೂರಕ ಅಂದಾಜುಗಳ ಎರಡನೇ ಕಂತಿನ ಬೇಡಿಕೆಗಳ ಪ್ರಸ್ತಾವನೆ ವಿಧಾನಸಭೆಯಲ್ಲಿ ಅಂಗೀಕೃತಗೊಂಡಿತು.
ಪೂರಕ ಅಂದಾಜನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಂಡಿಸಿದರು. ಈ ಪೂರಕ ಅಂದಾಜುಗಳ ಮೇಲೆ ಮಾತನಾಡಿದ ಶಾಸಕ ಕೃಷ್ಣ ಭೈರೇಗೌಡ ಹಲವಾರು ವಿಷಯಗಳ ಬಗ್ಗೆ ಚರ್ಚಿಸಿದರು.
ನಾವು ಪ್ರತಿವರ್ಷ ಅಬಕಾರಿಯಿಂದ ಬರುವಂತಹ ಆದಾಯದ ಮೇಲೆಯೇ ಬಹಳ ಅವಲಂಬನೆ ಆಗಿದ್ದೇವೆ. ಇದು ಮುಂಬರುವ ದಿನಗಳಲ್ಲಿ ತುಂಬಾ ಮಾರಕ ಎಂದು ಕೃಷ್ಣ ಭೈರೇಗೌಡ ಆತಂಕ ವ್ಯಕ್ತಪಡಿಸಿದರು.
ಕೇಂದ್ರದ ಜಿಎಸ್ಟಿ ಮಂಡಳಿಯವರು ರಾಜ್ಯಕ್ಕೆ ಬರಬೇಕಾದ ಖೋತಾ ಭರಿಸುತ್ತಾರೆ. ಆದರೆ ಮುಂಬರುವ ಮಾರ್ಚ್ ಅಂತ್ಯಕ್ಕೆ ಖೋತಾ ಭರಿಸುವುದು ನಿಲ್ಲುತ್ತದೆ. ಇದ್ರಿಂದ ಸರ್ಕಾರಕ್ಕೆ ಈ ಮಂಡಳಿಯಿಂದ ಬರುವ ಸುಮಾರು 20 ಸಾವಿರ ಕೋಟಿ ರೂಪಾಯಿ ನಿಲ್ಲುತ್ತದೆ. ಇದು ಕೂಡಾ ರಾಜ್ಯದ ಆರ್ಥಿಕ ಸ್ಥಿತಿಯ ಮೇಲೆ ಹೊರೆ ಬೀಳುತ್ತದೆ. ಇದನ್ನು 2025ರವರೆಗೆ ಮುಂದುವರಿಸಬೇಕು ಎಂದು ಮಂಡಳಿಯ ಮೇಲೆ ಹಾಗೂ ಕೇಂದ್ರ ಹಣಕಾಸು ಸಚಿವರ ಮೇಲೆ ಒತ್ತಡ ಹೇರಬೇಕು ಎಂದು ಶಾಸಕ ಆಗ್ರಹಿಸಿದರು.
ಓದಿ:ಮೊಬೈಲ್ ಕೊಡದಿದ್ದಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ 12ರ ಬಾಲಕ
ಕೇಂದ್ರದ ಈ ನಿರ್ಧಾರವು ರಾಜ್ಯಗಳ ಸ್ವಾವಲಂಬನೆ ಹಕ್ಕನ್ನು, ಸ್ವಾಯತ್ತತೆ ಹಕ್ಕನ್ನು ಪ್ರಶ್ನಿಸಿದಂತಾಗುತ್ತದೆ. ಮುಂಬರುವ ದಿನಗಳಲ್ಲಿ ಆರ್ಥಿಕ ಸಂಪನ್ಮೂಲಗಳನ್ನು ಕ್ರೂಢೀಕರಿಸುವುದು ತುಂಬಾ ದೊಡ್ಡ ಸವಾಲಾಗುತ್ತದೆ ಎಂದು ಕೃಷ್ಣ ಭೈರೇಗೌಡ ಎಚ್ಚರಿಸಿದರು.
ಕರ್ನಾಟಕ ರಾಜ್ಯದ ಸಾಲ ಪಡೆಯುವ ನಿಗದಿತ ಪ್ರಮಾಣದ ಕೆಳಗೆ ಹೋಗುತ್ತಿದ್ದೇವೆ ಎಂದು ಆತಂಕ ವ್ಯಕ್ತಪಡಿಸಿದರು. ಅವಳಿ ಸುಧಾರಣೆಗೆ ಯಾವ ಕ್ರಮ ಕೈಗೊಂಡಿದ್ದೀರಿ, ಅನಧಿಕೃತ ಖರ್ಚನ್ನು ಹೇಗೆ ನಿಭಾಯಿಸುತ್ತೀರಿ ಎಂಬುದನ್ನು ಸದನಕ್ಕೆ ತಿಳಿಸಬೇಕು ಎಂದು ಶಾಸಕ ಆಗ್ರಹಿಸಿದರು.
ಈಗ ಪೂರಕ ಬಜೆಟ್ನಲ್ಲಿ ವಿವಿಧ ಇಲಾಖೆಗಳಿಗೆ ನಿಗದಿ ಮಾಡಿರುವ ಹಣ ಯಾವುದಕ್ಕೂ ಸಾಲುವುದಿಲ್ಲ. ಇದನ್ನು ಹೆಚ್ಚಿಸಬೇಕು ಎಂದು ಕೃಷ್ಣ ಭೈರೇಗೌಡ ಒತ್ತಾಯಿಸಿದರು.
ಜಿಎಸ್ಟಿ ಖೋತಾ ಪರಿಹಾರ ವಿಸ್ತರಿಸಲು ಕೇಂದ್ರದ ಮೇಲೆ ಒತ್ತಡ ಹೇರಿ ಎಂಬ ಕಾಂಗ್ರೆಸ್ ಒತ್ತಾಯಕ್ಕೆ ಪ್ರತಿಕ್ರಿಯಿಸಿದ ಸಿಎಂ, ಜಿಎಸ್ಟಿ ಬಂದಾಗ ನಾವೆಲ್ಲಾ ರಾಜ್ಯಗಳೂ ಸಹ ಐದು ವರ್ಷಗಳ ಕಾಲ ಜಿಎಸ್ಟಿ ಪರಿಹಾರ ನೀಡುವುದು ಎಂಬ ಒಪ್ಪಂದಕ್ಕೆ ಒಪ್ಪಿಗೆ ನೀಡಿದ್ದೇವೆ. ಆ ಪ್ರಕಾರ 2022ರ ಮಾರ್ಚ್ ತಿಂಗಳ ನಂತರ ಜಿಎಸ್ಟಿ ಮಂಡಳಿ ಜಿಎಸ್ಟಿ ಪರಿಹಾರ ನೀಡುವಂತಿಲ್ಲ ಎಂದರು.
ನಾನು ಇತ್ತೀಚೆಗೆ ದೆಹಲಿಗೆ ಹೋದಾಗಲೂ ಸಹ ಈ ಬಗ್ಗೆ ಕೇಂದ್ರ ಸಚಿವರಿಗೆ ಮನವಿ ಮಾಡಿದ್ದೇವೆ. ಜಿಎಸ್ಟಿ ಪರಿಹಾರ ನೀಡುವುದನ್ನು ವಿಸ್ತರಿಸಿ ಎಂದು ಮನವಿ ಮಾಡಿದ್ದೇನೆ. ಒಂದು ಒಳ್ಳೆಯ ನಿರ್ಧಾರ ಕೇಂದ್ರದಿಂದ ಪ್ರಕಟವಾಗುವ ನಿರೀಕ್ಷೆ ಇದೆ ಎಂದು ಸಿಎಂ ವಿಶ್ವಾಸ ವ್ಯಕ್ತಪಡಿಸಿದರು.