ಬೆಳಗಾವಿ: ಮನೆಯ ಜಾಗದ ವಿವಾದ ಕುರಿತಂತೆ ನಡೆದ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಗಳನ್ನು ಬಂಧಿಸಲು ಹೋದ ಪೊಲೀಸರ ಮೇಲೆಯೇ ಹಲ್ಲೆ ಮಾಡಿರುವ ಘಟನೆ ನಗರದಲ್ಲಿ ಜರುಗಿದೆ. ಈ ವೇಳೆ ಓರ್ವ ಆರೋಪಿಗೆ ಪೊಲೀಸರು ಬ್ಲೇಡ್ನಿಂದ ಕೈ, ಎದೆ ಭಾಗಕ್ಕೆ ಕೊಯ್ದು ಹಲ್ಲೆ ಮಾಡಿದ್ದಾರೆ ಎಂಬ ಆರೋಪವೂ ಕೇಳಿ ಬಂದಿದೆ.
ನಗರದ ಟಿಳಕವಾಡಿ ಪೊಲೀಸ್ ಠಾಣಾ ವ್ಯಾಪ್ತಿಯ ಮಂಗಳವಾರ ಪೇಟ್ನಲ್ಲಿ ಈ ಘಟನೆ ನಡೆದಿದೆ. ಮನೆ ಜಾಗದ ಸಲುವಾಗಿ ಮೂವರ ನಡುವೆ ಗಲಾಟೆ ಆಗಿದೆ. ಈ ಪೈಕಿ ಓರ್ವ ವ್ಯಕ್ತಿ ದೂರು ನೀಡಿದ್ದ. ಟಿಳಕವಾಡಿ ಪಿಎಸ್ಐ ಸೇರಿದಂತೆ ನಾಲ್ವರು ಪೊಲೀಸರು ಆರೋಪಿಗಳನ್ನು ಬಂಧಿಸಲು ಹೋದಾಗ ಅವರು ತಮ್ಮ ಹಲ್ಲೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಆದರೆ, ಆರೋಪಿ ಆಕಾಶ ಎಂಬುವರ ಪ್ರಕಾರ, ಮನೆ ಜಾಗದ ಸಲುವಾಗಿ ಕೋರ್ಟ್ನಲ್ಲಿ ಕೇಸ್ ಇತ್ತು. ಇನ್ನೊಬ್ಬರೊಂದಿಗೆ ಅಂಗಡಿ ಇಡುವ ಸಲುವಾಗಿ ಸಣ್ಣ ಗಲಾಟೆ ಆಗಿತ್ತು. ಆದ್ರೆ, ಟಿಳಕವಾಡಿ ಪೊಲೀಸರು ನಮ್ಮ ಮೇಲೆ ಇಲ್ಲಸಲ್ಲದ ಆರೋಪಗಳನ್ನು ಮಾಡಿ ನಮ್ಮ ವಿರೋಧಿಗಳೊಂದಿಗೆ ಶಾಮೀಲು ಆಗಿದ್ದಾರೆ. ನಮಗೆ ಆಗಿರುವ ಅನ್ಯಾಯದ ಕುರಿತು ದೂರು ನೀಡಲು ಹೋದರೆ ದೂರು ಸ್ವೀಕರಿಸದೆ ನಮ್ಮ ಮೇಲೆಯೇ ಪ್ರಕರಣ ದಾಖಲಿಸಿ ಕಿರುಕುಳ ನೀಡುತ್ತಿದ್ದಾರೆ. ಅಲ್ಲದೆ ಮನೆಗೆ ನುಗ್ಗಿ ಬ್ಲೇಡ್ನಿಂದ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಘಟನೆ ಕುರಿತು ಮಾಹಿತಿ ನೀಡಿರುವ ಟಿಳಕವಾಡಿ ಪಿಐ ಸಂಜೀವ ಬಡಿಗೇರ, ಕೆಲವು ಅಪರಾಧದ ಹಿನ್ನೆಲೆ ಆರೋಪಿಗಳನ್ನು ಕರೆತರಲು ಮನೆಗೆ ತೆರಳಿದ್ದ ಪಿಎಸ್ಐ ಸೇರಿ ಐವರು ಪೊಲೀಸರ ಮೇಲೆ ಮೂವರು ಹಲ್ಲೆ ಮಾಡಿದ್ದಾರೆ. ಅವರ ಮೇಲೆ ಕೇಸು ದಾಖಲಿಸಲಾಗಿದೆ. ಮೂವರಲ್ಲಿ ಓರ್ವನನ್ನು ವಶಕ್ಕೆ ಪಡೆಯಲಾಗಿದೆ. ಇನ್ನಿಬ್ಬರು ತಲೆ ಮರೆಸಿಕೊಂಡಿದ್ದು, ಹುಟುಕಾಟ ನಡೆದಿದೆ ಎಂದು ತಿಳಿಸಿದರು.