ಗೋಕಾಕ್:ಗೋಕಾಕ್ ಕ್ಷೇತ್ರದ ವಿಧಾನಸಭಾ ಉಪಚುನಾವಣೆಯ ಟಿಕೆಟ್ ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ಪಕ್ಷದಲ್ಲಿನ ಭಿನ್ನಾಭಿಪ್ರಾಯಗಳನ್ನು ಶಮನಗೊಳಿಸಲು ಬಿಜೆಪಿಯ ನಾಯಕರು ಸರ್ವ ಪ್ರಯತ್ನ ನಡೆಸುತ್ತಿದ್ದಾರೆ.
ಈ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದ ಅಶೋಕ ಪೂಜಾರಿ ಅವರನ್ನು ಮನವೊಲಿಸಲು ಕೇಂದ್ರ ರೈಲ್ವೆ ಸಚಿವ ಸುರೇಶ ಅಂಗಡಿ ಅವರು ಪ್ರಯತ್ನ ನಡೆಸಿದ್ದಾರೆ.ಮೊದಲು ಬಿಜೆಪಿ ಜಿಲ್ಲಾಧ್ಯಕ್ಷ ಡಾ. ವಿಶ್ವನಾಥ ಪಾಟೀಲ, ಗೋಕಾಕ ಉಸ್ತುವಾರಿ ಎ. ಎಸ್. ಪಾಟೀಲ (ನಡಹಳ್ಳಿ), ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಿಕಾಯಿ ಅವರು ಸಂಜೆಗೆ ಅಶೋಕ ಪೂಜಾರಿ ಮನೆಗೆ ಆಗಮಿಸಿ ಚರ್ಚಿಸಿದರು. ಅದೇ ಸಮಯದಲ್ಲಿ ಬಿಜೆಪಿ ಅಭ್ಯರ್ಥಿ ರಮೇಶ ಜಾರಕಿಹೊಳಿ ತಮ್ಮ ಪುತ್ರ ಅಮರನಾಥ ಹಾಗೂ ಎಸ್.ಎ. ಕೊತವಾಲ ಅವರೊಂದಿಗೆ ಆಗಮಿಸಿ ಚರ್ಚೆಯಲ್ಲಿ ಭಾಗವಹಿಸಿದರು.
ಅಶೋಕ ಪೂಜಾರಿ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕೇಂದ್ರ ರೈಲ್ವೆ ಸಚಿವ ಸುರೇಶ ಅಂಗಡಿ ಭೇಟಿಯ ಬಳಿಕ ಸುರೇಶ ಅಂಗಡಿ ಮಾಧ್ಯಮದೊಂದಿಗೆ ಮಾತನಾಡಿ, ಬಿಜೆಪಿ ಅಭ್ಯರ್ಥಿ ರಮೇಶ ಜಾರಕಿಹೊಳಿ ಅವರನ್ನು ಕಾರ್ಯಕರ್ತರು ಒಗ್ಗಟ್ಟಿನಿಂದ ಶ್ರಮಿಸಿ ಅತ್ಯಧಿಕ ಮತಗಳಿಂದ ಗೆಲ್ಲಿಸಬೇಕು. ಅಶೋಕ ಪೂಜಾರಿ ತಮ್ಮ ನಿರ್ಧಾರವನ್ನು ನಾಳೆ ಸಂಜೆಗೆ ತಿಳಿಸುವುದಾಗಿ ಹೇಳಿದ್ದಾರೆ. ಅವರು ಪಕ್ಷ ಸೂಚಿಸುವ ಅಭ್ಯರ್ಥಿಯ ಪರ ಕೆಲಸ ಮಾಡುತ್ತಾರೆ ಎಂಬ ಆಶಾಭಾವನೆ ಹೊಂದಿದ್ದೇನೆ ಎಂದರು.
ರಮೇಶ ಜಾರಕಿಹೊಳಿ ಮಾತನಾಡಿ, ಅಶೋಕ ಪೂಜಾರಿ ನನ್ನ ಸ್ನೇಹಿತ. ಅವರಿಗೆ ಪಕ್ಷದಲ್ಲಿ ಸೂಕ್ತ ಸ್ಥಾನಮಾನ ನೀಡಲು ಪ್ರಯತ್ನಿಸುವುದಾಗಿ ತಿಳಿಸಿದರು. ಚುನಾವಣೆಯಲ್ಲಿ ನನಗೆ ಬೆಂಬಲ ನೀಡುತ್ತಾರೆ ಎಂಬ ವಿಶ್ವಾಸವಿದೆ ಎಂದರು.
ಮುನಿಸಿಕೊಂಡಿದ್ದ ಅಶೋಕ ಪೂಜಾರಿ ಮನವೊಲಿಸಲು ಬಿಜೆಪಿ ಮುಖಂಡರು ಪ್ರಯತ್ನಿಸುತ್ತಿದ್ದು, ಅವರ ನಿಲುವು ಏನು ಎಂಬುದನ್ನು ತಿಳಿದುಕೊಳ್ಳಲು ಭಾನುವಾರದವರೆಗೂ ಕಾಯಬೇಕಿದೆ.