ಚಿಕ್ಕೋಡಿ: ಸರ್ವೋಚ್ಛ ನ್ಯಾಯಾಲಯದ ಆದೇಶದನ್ವಯ ಸ್ಪರ್ಶ ಜಾತಿಗಳಾದ ಬಂಜಾರ, ಭೋವಿ, ಕೊರಮ, ಕೊರಚ ಸಮುದಾಯಗಳನ್ನು ಪರಿಶಿಷ್ಟ ಜಾತಿಗಳ ಪಟ್ಟಿಯಿಂದ ತೆಗೆದುಹಾಕುವಂತೆ ಒತ್ತಾಯಿಸಿ ಕಾಗವಾಡ ತಾಲೂಕು ದಲಿತ ಸಂಘಟನೆಗಳ ಒಕ್ಕೂಟದಿಂದ ತಹಶಿಲ್ದಾರ್ ಪ್ರಮೀಳಾ ದೇಶಪಾಂಡೆಯವರ ಮೂಲಕ ಮುಖ್ಯ ಕಾರ್ಯದರ್ಶಿಗಳಿಗೆ ಮನವಿ ಸಲ್ಲಿಸಲಾಯಿತು.
ಪರಿಶಿಷ್ಟ ಪಟ್ಟಿಯಿಂದ ಸ್ಪರ್ಶ ಜಾತಿಗಳನ್ನು ಕೈಬಿಡಲು ಒತ್ತಾಯ - ರಾಜ್ಯ ದಲಿತ ಸಂಘರ್ಷ ಸಮಿತಿ
ಸ್ಪರ್ಶ ಜಾತಿಗಳಾದ ಬಂಜಾರ, ಭೋವಿ, ಕೊರಮ, ಕೊರಚ ಸಮುದಾಯಗಳನ್ನು ಪರಿಶಿಷ್ಟ ಜಾತಿಗಳ ಪಟ್ಟಿಯಿಂದ ತೆಗೆದುಹಾಕುವಂತೆ ದಲಿತ ಸಂಘಟನೆಗಳ ಒಕ್ಕೂಟ ಆಗ್ರಹಿಸಿದೆ.
ಇದಕ್ಕೂ ಮುನ್ನ ತಹಶಿಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸಿದ ದಲಿತ ಸಂಘಟನೆಯ ನೂರಾರು ಸದಸ್ಯರು ಬಳಿಕ ಮನವಿ ಸಲ್ಲಿಸಿದರು. ರಾಜ್ಯ ದಲಿತ ಸಂಘರ್ಷ ಸಮಿತಿ ಸಂಚಾಲಕ ಶ್ರೀಕಾಂತ ತಳವಾರ ಮಾತನಾಡಿ, 150 ವರ್ಷಗಳ ಹಳೆಯ ದಾಖಲೆಗಳ ಬಗ್ಗೆ ಅಭ್ಯಾಸ ಮಾಡಿ ಸಮಾಜದ ಮುಖಂಡರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಇದರಲ್ಲಿ 4 ಜಾತಿಗಳನ್ನು ಎಸ್ಸಿ-ಎಸ್ಟಿ ಕೋಟಾದಿಂದ ತೆಗೆದುಹಾಕಬೇಕು ಎಂದು ಆಗ್ರಹಿಸಿದರು.
ತಹಶಿಲ್ದಾರ್ ಪ್ರಮೀಳಾ ದೇಶಪಾಂಡೆ ಮನವಿ ಸ್ವೀಕರಿಸಿ, ಜಿಲ್ಲಾಧಿಕಾರಿ ಮುಖಾಂತರ ರಾಜ್ಯ ಸರ್ಕಾರಕ್ಕೆ ಮನವಿ ತಲುಪಿಸಲಾಗುವುದು ಎಂದರು. ಕಾಗವಾಡ ಪಿಎಸ್‍ಐ ಹನುಮಂತ ಧರ್ಮಟ್ಟಿ ಮತ್ತು ಸಿಬ್ಬಂದಿ ಬಂದೋಬಸ್ತ್ ವ್ಯವಸ್ಥೆ ಮಾಡಿದ್ದರು.