ಬೆಳಗಾವಿ:ರಾಜ್ಯ ಸರ್ಕಾರದ ಮತಾಂತರ ನಿಷೇಧ ವಿಧೇಯಕವನ್ನು ವಿರೋಧ ಮಾಡಿದರೆ ಕಾಂಗ್ರೆಸ್ ನಿರ್ನಾಮವಾಗಲಿದೆ ಎಂದು ಅಧಿವೇಶನದಲ್ಲಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಕಿಡಿಕಾರಿದರು.
ವಿಧೇಯಕದ ಕುರಿತ ಚರ್ಚೆಯಲ್ಲಿ ಮಾತನಾಡಿದ ಅವರು, ಸವಿಂಧಾನಬದ್ಧವಾದ ಧಾರ್ಮಿಕ ಹಕ್ಕನ್ನು ರಕ್ಷಿಸುವುದೇ ಈ ವಿಧೇಯಕದ ಮುಖ್ಯ ಉದ್ದೇಶ. ನೂತನ ಕಾನೂನು ಜಾರಿಯಿಂದ ಯಾವುದೇ ಧರ್ಮಕ್ಕೆ ಧಕ್ಕೆ ಇಲ್ಲ. ಕಾಂಗ್ರೆಸ್ ನಾಯಕರು ಗೊಂದಲದಲ್ಲಿದ್ದು, ಸದನಕ್ಕೆ ತಪ್ಪು ಮಾಹಿತಿ ನೀಡುತ್ತಿದ್ದಾರೆ. ಸಿದ್ದರಾಮಯ್ಯವರೇ ತಮ್ಮ ಸರ್ಕಾರದ ಅವಧಿಯಲ್ಲಿ ಈ ವಿಧೇಯಕ ಮಂಡನೆಗೆ ಮುಂದಾಗಿದ್ದರು.
ದಾಖಲೆಗಳನ್ನು ಪರಿಶೀಲನೆ ಬಳಿಕ ಸಿದ್ದರಾಮಯ್ಯ ವಿಧೇಯಕ ಅಂಗೀಕಾರಕ್ಕೆ ಒಪ್ಪಿಗೆ ನೀಡುತ್ತಾರೆ ಎಂದುಕೊಂಡಿದ್ದೆ. ಅವರ ಸಿದ್ಧಪಡಿಸಿದ ವಿಧೇಯಕದಲ್ಲಿ ನಾವು ಕೂಡ ಕೆಲವು ಅಂಶಗಳನ್ನು ಸೇರಿಸಿದ್ದೇವೆ. ಒತ್ತಾಯಪೂರ್ವಕ ಮತಾಂತರ ಆಗಬಾರದು ಎಂಬುವುದು ನಮ್ಮ ಉದ್ದೇಶ ಎಂದರು.
(ಇದನ್ನೂ ಓದಿ: ರಾಜ್ಯದಲ್ಲಿ ಇಂದು 12 ಒಮಿಕ್ರಾನ್ ದೃಢ: ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆ)
ಕ್ರೈಸ್ತರು ಏಸುವನ್ನು, ಮುಸ್ಲಿಮರು ಫೈಗಂಬರ್ ಹಾಗೂ ಹಿಂದೂಗಳು ಅವರ ದೇವರನ್ನು ಪೂಜಿಸಬಹುದು. ಅದಕ್ಕೇನೂ ನಾವು ನಿರ್ಬಂಧ ಹೇರುತ್ತಿಲ್ಲ. ಕಾಂಗ್ರೆಸ್ ಈ ವಿಧೇಯಕವನ್ನು ವಿರೋಧಿಸುತ್ತಿರುವುದಕ್ಕೆ ರಾಜ್ಯದ ಹಲವು ಜನರು ನೊಂದಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿಧೇಯಕವನ್ನು ಹರಿದು ಬಿಸಾಕಿದ್ದಾರೆ. ಅವರು ಈ ರೀತಿಯ ವರ್ತನೆ ತೋರುತ್ತಾರೆ ಎಂದು ನಾನು ಅಂದುಕೊಂಡಿರಲಿಲ್ಲ.
ಒಂದು ಕಾಲದಲ್ಲಿ ಕಾಂಗ್ರೆಸ್ ದೇಶದಲ್ಲಿ 400 ಲೋಕಸಭೆ ಸದಸ್ಯರನ್ನು ಹೊಂದಿತ್ತು. ಈಗ ಅದರ ಸಂಖ್ಯೆ 40ಕ್ಕೆ ಇಳಿದಿದೆ. ಈ ವಿಧೇಯಕವನ್ನು ಇಡೀ ರಾಜ್ಯವೇ ಸ್ವಾಗತಿಸುತ್ತಿರುವಾಗ ತಮ್ಮ ಸ್ವಾರ್ಥಕ್ಕಾಗಿ ಕಾಂಗ್ರೆಸ್ ನಾಯಕರಷ್ಟೇ ವಿರೋಧಿಸುತ್ತಿದ್ದಾರೆ. ನಾವು ಮುಸ್ಲಿಂ, ಕ್ರಿಶ್ಚಿಯನ್ ವಿರೋಧಿಗಳಲ್ಲ.
ಈ ಬಿಲ್ ಯಾರ ಪರವೂ ಅಲ್ಲ, ಯಾರ ವಿರೋಧವೂ ಅಲ್ಲ. ಹೀಗಾಗಿ ಸರ್ವಾನುಮತದಿಂದ ಬಿಲ್ ಪಾಸ್ ಮಾಡಿ ಕೊಡಬೇಕು ಎಂಬುವುದು ನನ್ನ ಮನವಿ. ಕಾಂಗ್ರೆಸ್ ವಿರೋಧಿಸಿದರೆ ಬಿಲ್ ಹರಿದಂತೆ ರಾಜ್ಯದ ಜನರು ಕಾಂಗ್ರೆಸ್ ಪಕ್ಷವನ್ನೇ ಹರಿದುಹಾಕುತ್ತಾರೆ ಎಂದು ಭವಿಷ್ಯ ನುಡಿದರು.
(ಇದನ್ನೂ ಓದಿ: ರಾಜ್ಯದಲ್ಲಿ ಸದ್ಯದಲ್ಲೇ 'ಉದ್ಯೋಗ ನೀತಿ' ಜಾರಿ: ಸಿಎಂ ಬೊಮ್ಮಾಯಿ)
ಸ್ವಾಮೀಜಿಗಳಿಗೆ ಬಿಎಸ್‍ವೈ ಕರೆ:
ಸ್ವಾಮೀಜಿಗಳಿಗೆ ಬಿಎಸ್‍ವೈ ಕರೆ ಮತಾಂತರ ನಿಷೇಧ ಮಸೂದೆಗೆ ವಿರೋಧ ಮಾಡಿದವರಿಗೆ ತಕ್ಕ ಪಾಠ ಕಲಿಸುವ ಕೆಲಸ ಎಲ್ಲಾ ಸ್ವಾಮಿಗಳು ಮಾಡಬೇಕು ಎಂದು ಮಾಜಿ ಸಿಎಂ ಯಡಿಯೂರಪ್ಪ ಕರೆ ನೀಡಿದರು.
ಸುವರ್ಣಸೌಧದಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಈ ಮಸೂದೆ ಜಾರಿಗೆ ತರಲು ಮುಂದಾಗಿದ್ದರು. ಈಗ ಬೇರೆ ಬೇರೆ ಕಾರಣಕ್ಕೆ ವಿರೋಧ ಮಾಡುತ್ತಿದ್ದಾರೆ. ನಾವೆಲ್ಲ ಒಟ್ಟಾಗಿ ಈ ಬಿಲ್ ಪಾಸ್ ಮಾಡಿದ್ದೇವೆ. ಸಾವಿರಾರು ಜನ ಸಾಧು ಸಂತರು ಮತಾಂತರ ಬಿಲ್ ಪಾಸ್ ಮಾಡಲು ಏಕೆ ಹಿಂದು ಮುಂದು ನೋಡುತ್ತಿದ್ದಾರೆ ಎಂಬ ಗೊಂದಲದ ವಾತಾವರಣದಲ್ಲಿದ್ದರು. ವಿನಾಶ ಕಾಲೇ ವಿಪರೀತ ಬುದ್ಧಿ. ಕಾಂಗ್ರೆಸ್ ಮುಳುಗುತ್ತಿರುವ ಹಡಗು ಎಂಬುದನ್ನು ಸಾಬೀತು ಮಾಡಿದ್ದಾರೆ ಎಂದು ಕಿಡಿ ಕಾರಿದರು.
ಡಿಕೆಶಿ ಬಿಲ್ ಕಾಪಿ ಹರಿದು ಹಾಕಿದ್ದರು. ಜನರೂ ಕಾಂಗ್ರೆಸ್ ಅನ್ನು ಹರಿದು ಬಿಸಾಕಿದ್ದಾರೆ. ದೇಶದ 26 ರಾಜ್ಯಗಳಲ್ಲಿ ಬಿಜೆಪಿ ಆಡಳಿತ ಇದೆ. ಕಾಂಗ್ರೆಸ್ ಅಡ್ರೆಸ್ ಇಲ್ಲ. ರಾಜ್ಯದಲ್ಲಿ ಉಸಿರಾಡುತ್ತಿದ್ದರು. ಮಸೂದೆ ವಿರೋಧ ಮಾಡಿ ಅದನ್ನು ಮೈಮೇಲೆ ಎಳೆದುಕೊಂಡು ಮುಂದೆ ಅಡ್ರೆಸ್ ಇಲ್ಲದಂತೆ ಆಗುತ್ತಾರೆ. ಕರ್ನಾಟಕ ರಾಜ್ಯದ ಉದ್ದಗಲಕ್ಕೆ ಪ್ರವಾಸ ಮಾಡಿ 140 ಹೆಚ್ಚ ಸೀಟು ಗೆದ್ದು ಬಿಜೆಪಿ ಅಧಿಕಾರಕ್ಕೆ ತರುತ್ತೇವೆ. ಮಸೂದೆ ಅಂಗೀಕಾರಕ್ಕೆ ಸಹಕಾರ ಕೊಟ್ಟ ಎಲ್ಲರಿಗೂ ಅಭಿನಂದನೆ. ಮಠಾಧಿಪತಿಗಳು ಆತಂಕದಲ್ಲಿದ್ದರು. ಬಿಜೆಪಿ ಒಂದಾಗಿ ಗಟ್ಟಿಯಾಗಿ ನಿಂತು ಮಸೂದೆಯನ್ನು ಪಾಸ್ ಮಾಡಿಸಿದ್ದೇವೆ ಎಂದರು.
ನಾವೆಲ್ಲರೂ ಆರ್ಎಸ್ಎಸ್:
ನಾವು ಕ್ರಿಶ್ಚಿಯನ್, ಮುಸ್ಲಿಂ ವಿರೋಧಿಗಳಲ್ಲ. ಎಲ್ಲಾ ಸಮಾಜದವರು ಒಂದೇ ತಾಯಿಯ ಮಕ್ಕಳಂತೆ ನೋಡಬೇಕು ಎಂಬುದು ನಮ್ಮ ನಿಲುವು. ಉದ್ದೇಶಪೂರ್ವಕವಾಗಿ ಗೊಂದಲ ಮೂಡಿಸಲು ಕಾಂಗ್ರೆಸ್ ಯತ್ನಿಸಿದೆ. ಅದಕ್ಕೆ ತಕ್ಕ ಪಾಠ ಕಲಿತಿದ್ದಾರೆ. ಛೀಮಾರಿ ಹಾಕಿಸಿಕೊಂಡಿದ್ದಾರೆ. ಸಿದ್ದರಾಮಯ್ಯ ಅವರು ಬೇಜವಾಬ್ದಾರಿಯಿಂದ ಅವರ ಸ್ಥಾನಕ್ಕೆ ಧಕ್ಕೆ ತರುವ ಕೆಲಸ ಮಾಡಿದ್ದಾರೆ. ಅದಕ್ಕಾಗಿ ಅವರ ನಡವಳಿಕೆಯನ್ನು ಖಂಡಿಸುತ್ತೇನೆ ಎಂದು ವಾಗ್ದಾಳಿ ನಡೆಸಿದರು.
ಆರ್ ಎಸ್ ಎಸ್ ಅಜೆಂಡಾ ಆರೋಪ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ನಾನು ಕೂಡ ಆರ್ ಎಸ್ ಎಸ್. ಪ್ರಧಾನಿಗಳೂ ಆರ್ ಎಸ್ ಎಸ್. ನಾವೆಲ್ಲರೂ ಆರ್ ಎಸ್ ಎಸ್ ಹಿನ್ನೆಲೆಯಿಂದ ಬಂದಂತವರು. ನಾವೆಲ್ಲಾ ಒಂದೇ ತಾಯಿಯ ಮಕ್ಕಳಂತೆ ಬದುಕುವ ಚಿಂತನೆ ನಮ್ಮದು ಎಂದರು.