ಚಿಕ್ಕೋಡಿ: ಉತ್ತರ ಕರ್ನಾಟಕದ ಸುಪ್ರಸಿದ್ಧ ಮಠಗಳಲ್ಲಿ ಒಂದಾದ ಬೆಳಗಾವಿಯ ಹುಕ್ಕೇರಿ ತಾಲೂಕಿನ ಶ್ರೀಜಗದ್ಗುರು ದುರದುಂಡೇಶ್ವರ ಸಿದ್ಧ ಸಂಸ್ಥಾನ ನಿಡಸೋಸಿ ಮಠದಲ್ಲಿ ಪ್ರತಿ ವರ್ಷ ವಿಜೃಂಭಣೆಯಿಂದ ನಡೆಯುತ್ತಿದ್ದ ಶ್ರಾವಣ ಮಾಸ ಆಚರಣೆಗೆ ಕೊರೊನಾ ಕಂಟಕ ಎದುರಾಗಿದೆ.
300 ವರ್ಷದಿಂದ ನಡೆಯುತ್ತಿದ್ದ ಅನ್ನ ದಾಸೋಹ ಸ್ಥಗಿತ - ಕೊರೊನಾ ಕಂಟಕ
ಕೊರೊನಾ ವೈರಸ್ ಕಾರಣದಿಂದ ಈ ಹಿಂದೆ ನಡೆದಂತೆ ಶ್ರಾವಣ ಹಬ್ಬ ಜರುಗುವುದಿಲ್ಲ. ಕೊರೊನಾ ನಿಯಂತ್ರಿಸಲು ಸದ್ಯದ ಮಟ್ಟಿಗೆ ನಿಡಸೋಸಿ ಮಠಕ್ಕೆ ಭಕ್ತರು ಬರುವುದನ್ನು ನಿಲ್ಲಿಸಿ ಎಂದು ನಿಡಸೋಸಿ ಮಠದ ಜಗದ್ಗುರು ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ ಮನವಿ ಮಾಡಿದರು.
300 ವರ್ಷದಿಂದ ನಡೆಯುತ್ತಿರುವ ಅನ್ನದಾಸೋಹವನ್ನು ಕೊರೊನಾ ಕಾರಣದಿಂದ ನಿಲ್ಲಿಸಿದ್ದೇವೆ. ಕೋವಿಡ್-19 ಹಾವಳಿ ದಿನೇ ದಿನೆ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಮಠಕ್ಕೆ ಭಕ್ತರು ಬರಬೇಡಿ ಎಂದು ನಿಡಸೋಸಿ ಮಠ ಜಗದ್ಗುರು ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ ಮನವಿ ಮಾಡಿದರು.
ಸರ್ಕಾರ ಹೊರಡಿಸಿರುವ ಆದೇಶವನ್ನು ನಾವು ಪಾಲಿಸುತ್ತಿದ್ದೇವೆ. ಈ ಹಿಂದೆ ನಡೆದಂತೆ ಶ್ರಾವಣ ಹಬ್ಬ ಜರುಗುವುದಿಲ್ಲ. ಶ್ರಾವಣ ಮಾಸದ ಪ್ರತಿ ಅಮಾವಾಸ್ಯೆಗೆ 6 ಸಾವಿಕ್ಕೂ ಅಧಿಕ ಭಕ್ತರು ಬಂದು ದರ್ಶನ ಪಡೆದು ಅನ್ನ ದಾಸೋಹದ ಪ್ರಸಾದ ಸ್ವೀಕರಿಸುತ್ತಿದ್ದರು. ಆದರೆ, ಈ ಬಾರಿ ಎಲ್ಲವೂ ನಿಂತು ಹೋಗಿದೆ. ಸ್ಥಳೀಯ ಭಕ್ತರೊಂದಿಗೆ ಸರಳವಾಗಿ ಆಚರಿಸಲಿದ್ದೇವೆ. ಆದಷ್ಟು ಬೇಗ ಕೊರೊನಾದಿಂದ ನಮ್ಮ ಜನ ಮುಕ್ತಿ ಪಡೆಯಲಿ ಎಂದು ಆಶಿಸುವೆ ಎಂದರು.