ಬೆಳಗಾವಿ: ಸೇವಾ ನಿವೃತ್ತಿಯ ಬೀಳ್ಕೊಡುಗೆ ವೇಳೆ ಇಲ್ಲಿನ ಮಹಾನಗರ ಪಾಲಿಕೆ ನೌಕರ ಜೈ ಮಹಾರಾಷ್ಟ್ರ ಎಂದು ಘೋಷಣೆ ಕೂಗಿ ಬಳಿಕ ಕ್ಷಮಾಪಣೆ ಪತ್ರ ಬರೆದಿರುವ ಘಟನೆ ಬೆಳಕಿಗೆ ಬಂದಿದೆ. ದ್ವಿತೀಯ ದರ್ಜೆ ನೌಕರನಾಗಿದ್ದ ಶಿವಾಜಿ ಕಳಸೇಕರ್, ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿ, ಕೊನೆಯಲ್ಲಿ 'ಜೈ ಮಹಾರಾಷ್ಟ್ರ' ಎಂದಿದ್ದರು.
ಮಹಾನಗರ ಪಾಲಿಕೆ ಆಯುಕ್ತರು ಹಾಗೂ ಅಧಿಕಾರಿಗಳ ಸಮ್ಮುಖದಲ್ಲಿ ಕಾರ್ಯಕ್ರಮ ನಡೆದಿತ್ತು. ಶಿವಾಜಿ ಕಳಸೇಕರ್ ಮೇ 31ರಂದು ಸೇವಾ ನಿವೃತ್ತಿಯಾಗಿದ್ದರು. 33 ವರ್ಷಗಳ ಕಾಲ ಕರ್ನಾಟಕದ ಅನ್ನ ತಿಂದು ಕೊನೆಯಲ್ಲಿ ಮಹಾರಾಷ್ಟ್ರಕ್ಕೆ 'ಜೈ' ಎಂದು ಘೋಷಣೆ ಕೂಗಿದ್ದರು. ಘಟನೆಗೆ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಆಕ್ರೋಶ ವ್ಯಕ್ತಪಡಿಸಿ ಕ್ರಮಕ್ಕೆ ಆಗ್ರಹಿಸಿದ್ದರು.