ಬೆಳಗಾವಿ:ಜಮ್ಮು ಕಾಶ್ಮೀರದಲ್ಲಿರುವ ಹಿಂದೂಗಳ ಪವಿತ್ರ ಯಾತ್ರಾಸ್ಥಳ ಅಮರನಾಥನ ದರ್ಶನಕ್ಕೆ ತೆರಳಿದ್ದ 50ಕ್ಕೂ ಹೆಚ್ಚು ಜನರು ಶೇಷನಾಗ ಎಂಬ ಪ್ರದೇಶದಲ್ಲಿ ಸುರಕ್ಷಿತವಾಗಿದ್ದಾರೆ ಎಂಬ ಮಾಹಿತಿ 'ಈಟಿವಿ ಭಾರತ'ಕ್ಕೆ ಲಭ್ಯವಾಗಿದೆ. ಶಿವಾಜಿ ನಗರ, ಕಾಮತಗಲ್ಲಿ ಸೇರಿದಂತೆ ವಿವಿಧೆಡೆಗಳಿಂದ 55-60 ಮಂದಿ ಅಮರನಾಥ ಯಾತ್ರೆ ಕೈಗೊಂಡಿದ್ದರು. ಆದರೆ, ಅಮರನಾಥ ಪರ್ವತದಲ್ಲಿ ಉಂಟಾದ ಮೇಘಸ್ಪೋಟ ಕುಟುಂಬಸ್ಥರಲ್ಲಿ ತೀವ್ರ ಆತಂಕಕ್ಕೆ ಕಾರಣವಾಗಿತ್ತು.
ಬೆಳಗಾವಿ ಮಹಾನಗರ ಪಾಲಿಕೆ ಸದಸ್ಯ ಶಿವಾಜಿ ಮಂಡೋಳಕರ ಅವರ ತಂಡದಲ್ಲಿ 32 ಜನರಿದ್ದು, ಅವರನ್ನು ಹೊರತುಪಡಿಸಿ 20ಕ್ಕೂ ಹೆಚ್ಚು ಬೆಳಗಾವಿಗರು ದರ್ಶನ ಪಡೆದುಕೊಂಡು ವಾಪಸ್ ಬರುವಾಗ ಮೇಘ ಸ್ಫೋಟದಿಂದಾಗಿ ಅಮರನಾಥ ದೇವಸ್ಥಾನದಿಂದ 20ಕಿ.ಮೀ. ದೂರದಲ್ಲಿರುವ ಶೇಷನಾಗ ಎಂಬಲ್ಲಿ ಸುರಕ್ಷಿತವಾಗಿದ್ದಾರೆ ಎಂಬ ಮಾಹಿತಿ ದೊರೆತಿದೆ.