ಕರ್ನಾಟಕ

karnataka

ETV Bharat / city

ತಡೆದ ಮಳೆ ಜಡಿದು ಬಂತು: ಚಿಕ್ಕೋಡಿ ಭಾಗದಲ್ಲಿ ಮತ್ತೊಮ್ಮೆ ಪ್ರವಾಹ ಭೀತಿ

ಚಿಕ್ಕೋಡಿ ಭಾಗದಲ್ಲಿ ಮತ್ತೊಮ್ಮೆ ಧಾರಾಕಾರವಾಗಿ ಮಳೆ ಸುರಿಯುತ್ತಿದ್ದು, ಮೂರನೇ ಸಲ ಪ್ರವಾಹದ ಆತಂಕ ಸೃಷ್ಟಿಸಿದೆ. ಇದು ನದಿ ತೀರದ ಜನರಿಗೆ ನುಂಗಲಾರದ ಬಿಸಿ ತುತ್ತು ಎನ್ನುವಂತಾಗಿದೆ.

By

Published : Oct 21, 2019, 11:55 PM IST

ಚಿಕ್ಕೋಡಿ ಭಾಗದಲ್ಲಿ ಮತ್ತೆ ಪ್ರವಾಹ ಭೀತಿ

ಚಿಕ್ಕೋಡಿ: ಕಳೆದ ಕೆಲ ತಿಂಗಳ ಹಿಂದಷ್ಟೇ ಮಹಾರಾಷ್ಟ್ರದಲ್ಲಿ ಸುರಿದ ಭಾರಿ ಮಳೆಯಿಂದಾಗಿ ಕೃಷ್ಣಾ ನದಿ ಉಕ್ಕಿ ಹರಿದು ಪ್ರವಾಹ ಪರಿಸ್ಥಿತಿ ಉಂಟಾಗಿತ್ತು. ಈಗ ಮತ್ತೊಮ್ಮೆ ವರುಣನ ಅಬ್ಬರದಿಂದಾಗಿ ನಿರೀಕ್ಷೆಗೂ ಮೀರಿ ನೀರಿನ ಮಟ್ಟ ಹೆಚ್ಚಾಗಿದ್ದು, ಬೆಳಗಾವಿ ಜಿಲ್ಲೆಯ ಬಹುತೇಕ ಕಡೆ ಜನ ಜೀವನ ಅತಂತ್ರವಾಗಿದೆ.

ಚಿಕ್ಕೋಡಿ ಭಾಗದಲ್ಲಿ ಮತ್ತೆ ಪ್ರವಾಹ ಭೀತಿ

ಚಿಕ್ಕೋಡಿ ತಾಲೂಕಿನ ಬೆಡಕಿಹಾಳದಲ್ಲಿ ಸರ್ಕಾರಿ ಆಸ್ಪತ್ರೆಗೆ ನೀರು ನುಗ್ಗಿದ್ದರೆ, ಹುಕ್ಕೇರಿ ತಾಲೂಕಿನ ಸಂಕೇಶ್ವರ ಪಟ್ಟಣದ ಲಕ್ಷ್ಮಿ ಹಳ್ಳ ತುಂಬಿರುವ ಕಾರಣ ಕಾರು, ಬೈಕ್​​ಗಳು ನೀರಿನಲ್ಲಿ ಆಟಿಕೆಯ ವಸ್ತುವಿನಂತೆ ಕೊಚ್ಚಿ ಹೋಗಿವೆ. ನಿಪ್ಪಾಣಿ ತಾಲೂಕಿನ ಗಳತಗಾ, ಬೋರಗಾಂವ, ವಾಡಿ ಗ್ರಾಮಗಳಲ್ಲಿ ಮನೆಗಳಿಗೆ ನೀರು ನುಗ್ಗಿರುವ ಕಾರಣ ನೀರನ್ನು ಹೊರಹಾಕಲು ಜನರು ಪರದಾಡುತ್ತಿದ್ದಾರೆ. ಇತ್ತ ಅಥಣಿ ತಾಲೂಕಿನ ಜಾಗೃತ ಸ್ಥಳವೆಂದೇ ಖ್ಯಾತಿ ಹೊಂದಿರುವ ಆದಿಶಕ್ತಿ ಯಲ್ಲಮ್ಮನಿಗೂ ಜಲಕಂಟಕ ಎದುರಾಗಿದ್ದು, ದೇವಸ್ಥಾನದ ಅರ್ಧದಷ್ಟು ನೀರು ಆವರಿಸಿ ಭಕ್ತರು ದೇವಿ ದರ್ಶನಕ್ಕೆ ಪರದಾಡುವಂತಾಗಿದೆ.

ಇಷ್ಟು ದಿನ ನಿಗದಿತ ಪ್ರಮಾಣದಲ್ಲಿ ಸುರಿಯದ ಮಳೆ ವರುಣನ ಅಬ್ಬರದಿಂದಾಗಿ ತಡೆದ ಮಳೆ ಜಡಿದು ಬಂತು ಅನ್ನುವ ಹಾಗೆ ಧಾರಾಕಾರವಾಗಿ ಸುರಿಯುತ್ತಿದೆ. ರಾತ್ರಿ ಇಡೀ ಸುರಿದ ಮಳೆಗೆ ಕೃಷ್ಣಾ ನದಿಯಲ್ಲಿ 20 ಅಡಿಗಿಂತ ಹೆಚ್ಚು ಒಳಹರಿವು ಹೆಚ್ಚಾಗಿ ಮತ್ತೆ ನದಿ ತೀರದಲ್ಲಿ ಪ್ರವಾಹದ ಆತಂಕ ಎದುರಾಗಿದೆ. ಹವಾಮಾನ ಇಲಾಖೆ ರೆಡ್ ಅಲರ್ಟ್​ ಘೋಷಿಸಿದ್ದರೂ ಜನರಿಗೆ ಯಾವುದೇ ಮಾಹಿತಿ ನೀಡದ ಜಿಲ್ಲಾಡಳಿತ ಮೌನ ವಹಿಸಿದೆ. ಅತ್ತ ಕೃಷ್ಣಾ ನದಿ ಪ್ರವಾಹದಿಂದ ಮನೆ ಕಳೆದುಕೊಂಡು ಬೀದಿಗೆ ಬಿದ್ದ ಸಂತ್ರಸ್ತರಿಗೂ ಸರಿಯಾಗಿ ಸ್ಪಂದಿಸಿಲ್ಲ. ಇತ್ತ ಸದ್ಯ ಜನರ ರಕ್ಷಣೆಗೂ ಧಾವಿಸುತ್ತಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇನ್ನು ಚಿಕ್ಕೋಡಿ ಉಪವಿಭಾಗದ ಏಳು‌ ಸೇತುವೆಗಳು ಮುಳಗಡೆಯಾಗಿದ್ದು, ಜನ ಜೀವನ ಅಸ್ಥವ್ಯಸ್ಥಗೊಂಡಿದೆ. ಈ ಬಾರಿ ಮೂರನೇ ಸಲ ಪ್ರವಾಹದ ಆತಂಕ ಸೃಷ್ಟಿಸಿದ್ದು, ನದಿ ತೀರದ ಜನರಿಗೆ ನುಂಗಲಾರದ ಬಿಸಿ ತುತ್ತು ಎನ್ನುವಂತಾಗಿದೆ. ಇನ್ನು ಪ್ರವಾಹಕ್ಕೆ ಒಳಗಾದ ಸಂತ್ರಸ್ತರಿಗೆ ನೆರವೇ ಸಿಕ್ಕಿಲ್ಲ, ಈಗ ಮತ್ತೆ ಪ್ರವಾಹದ ಆತಂಕ ಬಂದಿದ್ದು ಈಗ ನದಿ ತೀರದ ಸಂತ್ರಸ್ಥರು ಕಂಗಾಲಾಗಿದ್ದಾರೆ.

ABOUT THE AUTHOR

...view details