ಬೆಳಗಾವಿ :ವಿಧಾನ ಪರಿಷತ್ ಚುನಾವಣೆ ಬಳಿಕ ರಾಜ್ಯ ಪ್ರವಾಸ ಕೈಗೊಂಡು ಗ್ರಾಮ ಮಟ್ಟದಲ್ಲಿ ಪಕ್ಷ ಸಂಘಟಿಸಿ ರಾಜ್ಯದಲ್ಲಿ ಬಿಜೆಪಿ ಸರ್ಕಾರವನ್ನು ಮರಳಿ ಅಧಿಕಾರಕ್ಕೆ ತರುವುದಾಗಿ ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ಘೋಷಿಸಿದರು.
ಬೆಳಗಾವಿಯ ಸಿಪಿಇಡಿ ಮೈದಾನದಲ್ಲಿ ನಡೆದ ಬಿಜೆಪಿ ಜನಸ್ವರಾಜ್ ಸಮಾವೇಶದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ಮುಳುಗುವ ಹಡುಗು. ಚುನಾವಣೆ ಮುಗಿದ ಬಳಿಕ ರಾಜ್ಯ ಪ್ರವಾಸ ಮಾಡುತ್ತೇನೆ. ರಾಜ್ಯಾದ್ಯಂತ ಸಂಚರಿಸಿ ವಿವಿಧ ಮೋರ್ಚಾಗಳನ್ನು ಬಲಪಡಿಸುತ್ತೇನೆ.
ಮುಂಬರುವ ವಿಧಾನಸಭೆ ಚುನಾವಣೆ ನಮಗೆ ಸವಾಲಾಗಿದೆ. 2023ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಸೋಲಿಸಬೇಕಿದೆ. 140 ಕ್ಷೇತ್ರದಲ್ಲಿ ಬಿಜೆಪಿ ಗೆದ್ದು ಅಧಿಕಾರಕ್ಕೆ ಬರಬೇಕಿದೆ ಎಂದರು.
ಕ್ಷೇತ್ರದಲ್ಲಿ ಕವಟಗಿಮಠ ಉತ್ತಮ ಕಾರ್ಯ :ಪರಿಷತ್ ಚುನಾವಣೆಯ ಬಿಜೆಪಿ ಅಭ್ಯರ್ಥಿ ಮಹಾಂತೇಶ ಕವಟಗಿಮಠ ಕ್ಷೇತ್ರದಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡಿದ್ದಾರೆ. ಈ ಬಾರಿಯೂ ಕವಟಗಿಮಠ ಅವರು ದೊಡ್ಡ ಅಂತರದಲ್ಲಿ ಗೆಲ್ಲಬೇಕಿದೆ. ಮೊದಲನೇ ಪ್ರಾಶಸ್ತ್ಯದ ಮತ ನೀಡಿ ಅವರನ್ನು ಗೆಲ್ಲಿಸಬೇಕು ಎಂದು ಹೇಳಿದರು.
ದಲಿತರಿಗೆ ಸಿದ್ದರಾಮಯ್ಯ ಅಪಮಾನ :ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದಲಿತರಿಗೆ ಅಪಮಾನ ಮಾಡಿದ್ದಾರೆ. ಹೊಟ್ಟೆಪಾಡಿಗೆ ದಲಿತರು ಬಿಜೆಪಿ ಹೋಗಿದ್ದಾರೆ ಎಂದು ಕೀಳು ಹೇಳಿಕೆ ನೀಡಿದ್ದಾರೆ. ವಿರೋಧ ಪಕ್ಷದ ನಾಯಕರು ಕೂಡಲೇ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದ್ದಾರೆ.
ರಾಜ್ಯದಲ್ಲಿ ಮಳೆಯಿಂದ ಬೆಳೆ ನಾಶವಾಗಿದೆ. ರಾಜ್ಯ, ಕೇಂದ್ರದಿಂದ ಸಮೀಕ್ಷೆ ಮಾಡಿ ಹಣ ಬಿಡುಗಡೆಗೆ ಪ್ರಯತ್ನಿಸುವೆ. ರೈತ ಬೆಳೆದ ಬೆಳೆಗೆ ವೈಜ್ಞಾನಿಕ ಬೆಲೆ ಸಿಗಬೇಕು. ಮೂರು ಕೃಷಿ ಕಾಯ್ದೆ ವಾಪಸ್ ಬಗ್ಗೆ ಕಾಂಗ್ರೆಸ್ ಹಗುರುವಾಗಿ ಮಾತನಾಡುತ್ತಿದೆ. ಲೋಕಸಭಾ ಕಲಾಪ ಆರಂಭವಾದ ಬಳಿಕ ನಮ್ಮ ನಾಯಕರು ತಕ್ಕ ಉತ್ತರ ನೀಡುತ್ತಾರೆ ಎಂದು ತಿರುಗೇಟು ನೀಡಿದರು.