ಬೆಳಗಾವಿ:ಅನರ್ಹ ಶಾಸಕ ರಮೇಶ್ ಜಾರಕಿಹೊಳಿ ಪರ ಇತ್ತೀಚೆಗೆ ಗೋಕಾಕ್ ಕ್ಷೇತ್ರದಲ್ಲಿ ಜಾತಿ ಆಧಾರದ ಮೇಲೆ ಮತಯಾಚಿಸಿದ್ದಾರೆ ಎಂದು ಆರೋಪಿಸಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಲಾಗಿದೆ.
ಆರ್‌ಟಿಐ ಕಾರ್ಯಕರ್ತ ಭೀಮಪ್ಪ ಗಡಾದ್ ಅವರು ಸಿಎಂ ವಿರುದ್ಧ ಜಿಲ್ಲಾಧಿಕಾರಿ ಮೂಲಕ ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾದ ವರದಿಗಳ ದಾಖಲೆ ಸಹಿತ ಮುಖ್ಯ ಚುನಾವಣಾ ಆಯುಕ್ತರಿಗೆ ದೂರು ಸಲ್ಲಿಸಿದ್ದಾರೆ.
ಆರ್‌ಟಿಐ ಕಾರ್ಯಕರ್ತ ಭೀಮಪ್ಪ ಗಡಾದ್ ಈ ಕುರಿತು ಗೋಕಾಕ್ನಲ್ಲಿ ಮಾಹಿತಿ ನೀಡಿದ ಗಡಾದ್ ಅವರು, ಸಿಎಂ ಯಡಿಯೂರಪ್ಪ ಅವರು ಬೆಳಗಾವಿ ಜಿಲ್ಲೆಯ 3 ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರಚಾರ ನಡೆಸಿದ್ದರು. ಈ ವೇಳೆ ಜಾತಿ ಆಧಾರದಲ್ಲಿ ಮತಯಾಚನೆ ಮಾಡಿದ್ದಾರೆ. ಅಲ್ಲದೇ ಅನರ್ಹ ಶಾಸಕರು ಗೆದ್ದರೆ ಸಚಿವರನ್ನಾಗಿ ಮಾಡ್ತೇವೆ ಅಂತ ಬಹಿರಂಗ ಸಮಾವೇಶದಲ್ಲಿ ಆಮಿಷವೊಡ್ಡಿದ್ದಾರೆ. ನಮ್ಮದು ಜಾತ್ಯಾತೀತ ರಾಷ್ಟ್ರವಾಗಿದ್ದು, ಜಾತಿ, ಪಂಥದ ಹೆಸರಲ್ಲಿ ಆಮಿಷವೊಡ್ಡಲು ಅವಕಾಶ ಇಲ್ಲ. ಮುಖ್ಯಮಂತ್ರಿ ಅವರ ಈ ಹೇಳಕೆ ಜಾತ್ಯಾತೀತ ಮೌಲ್ಯಗಳಿಗೆ ವಿರುದ್ಧವಾಗಿದೆ. ಹೀಗಾಗಿ ಯಡಿಯೂರಪ್ಪ ಅವರ ವಿರುದ್ಧ ಈಗಾಗಲೇ ಇ-ಮೇಲ್ ಮೂಲಕ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದ್ದೇವೆ. ಜಿಲ್ಲಾಧಿಕಾರಿ ಭೇಟಿಯಾಗಿ ಮನವಿ ಸಲ್ಲಿಸಲಾಗಿದೆ ಎಂದು ತಿಳಿಸಿದರು.
ಇನ್ನು ಬಿಎಸ್ ವೈ ವಿರುದ್ಧ ದೂರು ದಾಖಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಲಾಗಿದೆ. ಸಿಎಂ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ಹೈಕೋರ್ಟ್ ಮೆಟ್ಟಿಲೇರುವುದಾಗಿ ಆರ್‌ಟಿಐ ಕಾರ್ಯಕರ್ತ ಭೀಮಪ್ಪ ಗಡಾದ್ ಎಚ್ಚರಿಕೆ ನೀಡಿದ್ದಾರೆ.