ಬೆಳಗಾವಿ:ಅಥಣಿ ತಾಲೂಕಿನ ಯಕ್ಕಂಚಿ ಗ್ರಾಮದ ಕೆನಾಲ್ನಲ್ಲಿ ಮೃತದೇಹ ಪತ್ತೆ ಪ್ರಕರಣಕ್ಕೆ ಮೇಜರ್ ಟ್ವಿಸ್ಟ್ ಸಿಕ್ಕಿದ್ದು, ಆತನ ಗೆಳೆಯನೇ ಕಬ್ಬಿಣದ ರಾಡ್ನಿಂದ ತಲೆಗೆ ಹೊಡೆದು ಕೊಲೆ ಮಾಡಿರುವುದು ಬಯಲಾಗಿದೆ. ಪ್ರಕರಣ ಸಂಬಂಧ ಅಪ್ರಾಪ್ತ ಬಾಲಕ ಸೇರಿ ಇಬ್ಬರು ಆರೋಪಿಗಳನ್ನು ಐಗಳಿ ಪೊಲೀಸರು ಬಂಧಿಸಿದ್ದಾರೆ.
ವಿಠ್ಠಲ ತಿಕಾರಾಮ ಬಣ್ಣೆನ್ನವರ(21) ಕೊಲೆಯಾದವನು. ಮೂಲತಃ ಮಹಾರಾಷ್ಟ್ರ ರಾಜ್ಯದ ಗುಂಗವಾಡ ಗ್ರಾಮದ ನಿವಾಸಿ ಆಗಿದ್ದ ವಿಠ್ಠಲ ಬಣ್ಣೆನ್ನವರ ಸದ್ಯ ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಬಿ.ಕೆ.ಉಗಾರ ಗ್ರಾಮದಲ್ಲಿ ಕುಟುಂಬ ಸಮೇತರಾಗಿ ವಾಸವಾಗಿದ್ದರು. ಅದೇ ಗ್ರಾಮದ ನಿವಾಸಿ ಸಂಕೇತ್ ವಿಠ್ಠಲ ಬಾಗಿ(19) ಕೊಲೆ ಮಾಡಿರುವ ಆರೋಪಿ.
ಬೆಳಗಾವಿ ಎಸ್ಪಿ ಡಾ.ಸಂಜೀವ್ ಪಾಟೀಲ ಮಾಧ್ಯಮದೊಂದಿಗೆ ಮಾತನಾಡಿದರು. ಪ್ರಕರಣದ ಹಿನ್ನೆಲೆ : ಕೊಲೆಯಾದ ವಿಠ್ಠಲ ಮತ್ತು ಕೊಲೆ ಮಾಡಿದ ಆರೋಪಿ ಸಂಕೇತ್ ಇಬ್ಬರು ಸ್ನೇಹಿತರಾಗಿದ್ದರು. ಜೊತೆಯಾಗಿಯೇ ಪ್ರತಿದಿನ ಕಾಲಕಳೆಯುತ್ತಿದ್ದ ಇವರು ಉತ್ತಮ ಒಡನಾಟವನ್ನೂ ಹೊಂದಿದ್ದರು. ಒಬ್ಬರನ್ನೊಬ್ಬರು ಬಿಟ್ಟಿರಲಾರದಷ್ಟು ಆತ್ಮೀಯರಾಗಿದ್ದ ವಿಠ್ಠಲ ಮತ್ತು ಸಂಕೇತ್ ತಮ್ಮಲ್ಲಿರುವ ಎಲ್ಲ ವಿಷಯಗಳನ್ನು ಹಂಚಿಕೊಳ್ಳುತ್ತಿದ್ದರಂತೆ. ಹೀಗಿದ್ದಾಗ ಒಂದು ದಿನ ಕೊಲೆ ಮಾಡಿರುವ ಆರೋಪಿ ಸಂಕೇತ್ ತಾನು ಪ್ರೀತಿಸುತ್ತಿದ್ದ ಹುಡುಗಿಯ ಫೋಟೋವನ್ನು ವಿಠ್ಠಲನ ಮಂದೆ ತೋರಿಸಿದ್ದಾನೆ.
ಇದನ್ನೇ ಅಡ್ವಾಂಟೇಜ್ ಆಗಿ ತೆಗೆದುಕೊಂಡ ವಿಠ್ಠಲ ಊರಿನವರಿಗೆ, ಕುಟುಂಬಸ್ಥರಿಗೆ ವಿಷಯ ತಿಳಿಸುವುದಾಗಿ ನಿತ್ಯ ಬೆದರಿಕೆ ಹಾಕಿದ್ದಲ್ಲದೇ ಬ್ಲ್ಯಾಕ್ಮೇಲ್ ಮಾಡಲು ಶುರುಮಾಡಿದ್ದನಂತೆ. ಸಾಕಷ್ಟು ಬಾರಿ ಪಾರ್ಟಿ, ಹೋಟೆಲ್ ಊಟ ಹೀಗೆ ಆತನಿಂದ ಹಣವನ್ನೂ ವಿಠ್ಠಲ ಪೀಕಿದ್ದನಂತೆ. ಇದರಿಂದ ರೋಸಿಹೋಗಿದ್ದ ಆರೋಪಿ ಸಂಕೇತ್ ವಿಠ್ಠಲನನ್ನು ಕೊಲೆ ಮಾಡುವ ನಿರ್ಧಾರಕ್ಕೆ ಬಂದಿದ್ದಾನೆ.
ಮತ್ತದೆ ಹಳೆಯ ಚಾಳಿಯನ್ನು ಮುಂದುವರೆಸಿದ್ದ ವಿಠ್ಠಲನನ್ನು ಕೊಲೆ ಮಾಡಲು (ಜು.24ರಂದು) ಮುಹೂರ್ತ ಫಿಕ್ಸ್ ಮಾಡಿಕೊಂಡಿದ್ದನು. ಅದರಂತೆ ಪಕ್ಕಾ ಪ್ಲಾನ್ ಮಾಡಿಕೊಂಡಿದ್ದ ಸಂಕೇತ್ ಮತ್ತೊಬ್ಬ ಗೆಳೆಯನ (ಓರ್ವ ಬಾಲಪರಾಧಿ) ಜೊತೆಗೆ ಕೊಲೆಗೆ ಸಂಚು ರೂಪಿಸಿ ಪಾರ್ಟಿ ಕೊಡುತ್ತೇನೆ ಬಾ ಅಂತಾ ಕರೆಸಿಕೊಂಡಿದ್ದಾನೆ. ಮೊದಲಿಗೆ ವಿಠ್ಠಲನಿಗೆ ಹೊಟ್ಟೆತುಂಬ ಸಾರಾಯಿ ಕುಡಿಸಿದ್ದಾರೆ. ಊಟ ಪಾರ್ಸಲ್ ಬರ್ತಾ ಇದೆ ಬಾ ಅಂತಾ ಅಥಣಿ ತಾಲೂಕಿನ ಯಕ್ಕಂಚಿ ಗ್ರಾಮದ ಹೊರವಲಯದಲ್ಲಿರುವ ಕೆನಾಲ್ ಬಳಿ ಕರೆದುಕೊಂಡು ಹೋಗಿದ್ದಾರೆ.
ಕೆನಾಲ್ ಬಳಿ ಕುಳಿತಾಗ ಹಿಂಬದಿಯಿಂದ ತಲೆಗೆ ರಾಡ್ನಿಂದ ಹೊಡೆದು ಕೊಲೆ ಮಾಡಿ ಆತನನ್ನು ಕೆನಾಲ್ಗೆ ಎಸೆದು ಹೋಗಿದ್ದಾರೆ. ಇತ್ತ ಸುದ್ದಿ ತಿಳಿದು ಘಟನಾ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ ಐಗಳಿ ಪೊಲೀಸರು ಮರ್ಡರ್ ಕೇಸ್ ದಾಖಲಿಸಿಕೊಂಡು ಕೇವಲ ಐದೇ ದಿನದಲ್ಲಿ ಓರ್ವ ಬಾಲಪರಾಧಿ ಸೇರಿ ಇಬ್ಬರು ಆರೋಪಿಗಳನ್ನು ಬಂಧಸಿದ್ದಾರೆ. ಐಗಳಿ ಪೊಲೀಸರ ಕಾರ್ಯಕ್ಕೆ ಬೆಳಗಾವಿ ಎಸ್ಪಿ ಡಾ.ಸಂಜೀವ್ ಪಾಟೀಲ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ :ಸಾಲ ಕೊಡಿಸುವುದಾಗಿ ಸ್ಯಾಂಡಲ್ವುಡ್ ನಿರ್ಮಾಪಕನಿಂದ ವಂಚನೆ?: ಪ್ರಕರಣ ದಾಖಲು