ಬೆಳಗಾವಿ:ವಿಧಾನ ಪರಿಷತ್ ಚುನಾವಣೆ ಪ್ರಚಾರಾರ್ಥ ಕುಂದಾನಗರಿಗೆ ಆಗಮಿಸಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಭೇಟಿಗೆ ಅವಕಾಶ ಸಿಗದಿರುವುದಕ್ಕೆ ಇಲ್ಲಿನ ರೈತರೊಬ್ಬರು ಭಾವುಕರಾದ ಘಟನೆ ನಡೆದಿದೆ.
ಪರಿಷತ್ ಚುನಾವಣೆಯ ಹಿನ್ನೆಲೆಯಲ್ಲಿ ಬಿಜೆಪಿ ಮುಖಂಡರು ಹಾಗೂ ಪದಾಧಿಕಾರಿಗಳ ಜೊತೆಗೆ ಸಭೆ ನಡೆಸಲು ಮುಖ್ಯಮಂತ್ರಿ ಬೊಮ್ಮಾಯಿ ಇಲ್ಲಿನ ಖಾಸಗಿ ರೆಸಾರ್ಟ್ಗೆ ಆಗಮಿಸಿದ್ದರು. ಇದೇ ವೇಳೆ, ಅಕಾಲಿಕ ಮಳೆಯಿಂದ ಭತ್ತದ ಬೆಳೆ ಹಾನಿಗೆ ಸೂಕ್ತ ಪರಿಹಾರ ಕೋರಿ ಸಿಎಂಗೆ ಮನವಿ ನೀಡಲು ರೈತ ರವಿ ಎಂಬುವರು ಆಗಮಿಸಿದ್ದರು. ಆದರೆ, ಮುಖ್ಯಮಂತ್ರಿ ಭೇಟಿಗೆ ಪೊಲೀಸರು ರೈತನಿಗೆ ಅವಕಾಶ ನೀಡಲಿಲ್ಲ.
ಇದರಿಂದ ಭಾವುಕರಾದ ರೈತ ರವಿ, ಮುಖ್ಯಮಂತ್ರಿ ಭೇಟಿ ಮಾಡಿ ಬೆಳೆ ಹಾನಿ ಬಗ್ಗೆ ಮನವಿ ಮಾಡಲು 50 ಕಿಲೋ ಮೀಟರ್ ದೂರದಿಂದ ಬಂದಿದ್ದೇನೆ. ಆದರೆ, ಎಸಿಪಿ ಸಾಹೇಬರು ನನ್ನನ್ನು ಹಿಡಿದು ತಳ್ಳಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದರು.
ಮುಖ್ಯಮಂತ್ರಿ ಭೇಟಿಗೆ ಅವಕಾಶ ನೀಡದ್ದಕ್ಕೆ ಕಣ್ಣೀರು ಹಾಕಿದ ಬೆಳಗಾವಿ ರೈತ ಇದನ್ನೂ ಓದಿ: 'ನನ್ನ ತಂದೆಗೆ ಹೊಡಿಬೇಡಿ'... ನಡುರಸ್ತೆಯಲ್ಲೇ ಕಣ್ಣೀರು ಹಾಕಿದ ಮಗಳು!
ರೈತನ ಕಷ್ಟ ಕೇಳದ ಇವರು ಯಾವ ಸೀಮೆ ಸಿಎಂ? ಭತ್ತದ ಬೆಳೆಗೆ ಸೂಕ್ತ ಪರಿಹಾರ ನೀಡುವಂತೆ ಮನವಿ ಮಾಡಲು ಬಂದಿದ್ದೆ. 50 ಕಿಲೋಮೀಟರ್ ದೂರದಿಂದ ನಾನು ಪ್ರತಿಭಟನೆಗೆ ಮಾಡಲು ಬಂದಿರಲಿಲ್ಲ. ರೈತರ ಮೇಲೆ ಸಿಎಂ ಮತ್ತು ಪೊಲೀಸರು ಕಾಳಜಿ ತೋರಬೇಕು ಎಂದು ಕೈ ಮುಗಿದು ಕೇಳಿಕೊಂಡರು. ಬಳಿಕ ಪೊಲೀಸರು ಇನ್ನೊಮ್ಮೆ ಸಿಎಂ ಭೇಟಿಗೆ ಅವಕಾಶ ನೀಡಲಾಗುವುದು ಎಂದು ಹೇಳಿ ಅಸಮಾಧಾನಗೊಂಡ ರೈತನನ್ನು ಸಮಾಧಾನಪಡಿಸಿದರು.