ಕರ್ನಾಟಕ

karnataka

ETV Bharat / city

ಮನೆ ಗೋಡೆ ಕುಸಿತ ಪ್ರಕರಣ: ಒಂದೇ ಕುಟುಂಬದ 6 ಜನ ಮೃತ, ಇಬ್ಬರು ಬಚಾವ್ ಆಗಿದ್ದೇಗೆ?

ಕಳೆದ ಎರಡು ದಿನಗಳಿಂದ ಬಡಾಲ ಅಂಕಲಗಿ ಗ್ರಾಮದಲ್ಲಿ ಬಿಟ್ಟು ಬಿಡದೇ ಮಳೆಯಾಗುತ್ತಿದೆ. ಮಳೆಯಿಂದ ಇಂದು ಸಂಜೆ ಖನಗಾಂವಿ ಕುಟುಂಬದ ದುರಸ್ತಿ ಹಂತದಲ್ಲಿದ್ದ ಒಂದು ಗೋಡೆ ಬಿದ್ದಿದ್ದನ್ನು ನೋಡಲು ಹೋದ ವೇಳೆ ದುರಂತ ಸಂಭವಿಸಿದೆ.

7 dead as house collapse in Belagavi
7 dead as house collapse in Belagavi

By

Published : Oct 7, 2021, 12:42 AM IST

Updated : Oct 7, 2021, 5:01 AM IST

ಬೆಳಗಾವಿ: ನಾಡಹಬ್ಬ ದಸರಾಗೆ ಸಿದ್ಧತೆಯಲ್ಲಿದ್ದ ಬೆಳಗಾವಿ ತಾಲೂಕಿನ ಬಡಾಲ ಅಂಕಲಗಿ ಗ್ರಾಮದಲ್ಲೀಗ ಸ್ಮಶಾನ ಮೌನ ಆವರಿಸಿದೆ. ಮನೆ ಕುಸಿತದಿಂದ ಒಂದೇ ಕುಟುಂಬದ 6 ಜನ ಸೇರಿ 7 ಮಂದಿ ದುರ್ಮರಣ ಹೊಂದಿದ್ದಾರೆ. ಅದೃಷ್ಟವಶಾತ್ ಕುಟುಂಬದ ಇಬ್ಬರು ಮಾತ್ರ ಬಚಾವ್ ಆಗಿದ್ದಾರೆ.

ಒಂದೇ ಮನೆಯಲ್ಲಿ ಪ್ರತ್ಯೇಕವಾಗಿ ನೆಲೆಸಿದ್ದ ಖನಗಾಂವಿ ಕುಟುಂಬದ 8 ಜನ ಸದಸ್ಯರ ಪೈಕಿ ಇಬ್ಬರು ಮಾತ್ರ ಬದುಕುಳಿದಿದ್ದಾರೆ. ಭೀಮಪ್ಪ ಹಾಗೂ ಅರ್ಜುನ್ ಸಹೋದರರು ಒಂದೇ ಮನೆಯಲ್ಲಿ ಪ್ರತ್ಯೇಕವಾಗಿ ನೆಲೆಸಿದ್ದರು. 40 ವರ್ಷದ ಹಳೆಯ ಮನೆಯಲ್ಲಿ ನವೀಕರಣಕ್ಕಾಗಿ ಮೇಲ್ಚಾವಣಿ ತೆಗೆದು, ಪಕ್ಕದಲ್ಲಿ ಶೆಡ್ ನಿರ್ಮಿಸಿಕೊಂಡು ವಾಸವಾಗಿದ್ದರು. ಖನಗಾಂವಿ ಕುಟುಂಬದ ಕಿರಿಯ ಸಹೋದರ ಅರ್ಜುನ ಖನಗಾಂವಿ, ಪತ್ನಿ ಸತ್ಯವ್ವ ಖನಗಾಂವಿ, ಪುತ್ರಿ ಪೂಜಾ ಮೃತರಾಗಿದ್ದಾರೆ. ಇನ್ನು ಇವರ ಸಹೋದರ ಭೀಮಪ್ಪ ಹಾಗೂ ಪುತ್ರ ದೇವರಾಜ್ ಬಚಾವ್ ಆಗಿದ್ದಾರೆ. ಆದರೆ ಭೀಮಪ್ಪನ ಪತ್ನಿ ಹಾಗೂ ಪುತ್ರಿ ಘಟನೆಯಲ್ಲಿ ಮೃತರಾಗಿದ್ದಾರೆ.

ಅರ್ಜುನ ಖನಗಾಂವಿ (45), ಪತ್ನಿ ಸತ್ಯವ್ವ ಅರ್ಜುನ್ ಖನಗಾಂವಿ (45), ಪುತ್ರಿ ಪೂಜಾ ಅರ್ಜುನ್ ಖನಗಾಂವಿ (8) ಮತ್ತು ಸವಿತಾ ಭೀಮಪ್ಪ ಖನಗಾಂವಿ (30), ಲಕ್ಷ್ಮಿ ಭೀಮಪ್ಪ ಖನಗಾಂವಿ (15), ಶಾಂತವ್ವ ಭೀಮಪ್ಪ ಖನಗಾಂವಿ ಹಾಗೂ ಕಾಶವ್ವ ವಿಠ್ಠಲ ಕೊಳೆಪ್ಪನವರ (8) ಮೃತಪಟ್ಟವರು ಎಂದು ತಿಳಿದು ಬಂದಿದೆ.

ಬಚಾವ್ ಆಗಿದ್ದೇಗೆ?

ಭೀಮಪ್ಪ ‌ಹಾಗೂ ಇವರ ಪುತ್ರ ದೇವರಾಜ್ ಬದುಕಿದ್ದಾರೆ. ಘಟನೆ ವೇಳೆ ಭೀಮಪ್ಪ ಅದೇ ಗ್ರಾಮದ ಕಿರಾಣಿ ಅಂಗಡಿಗೆ ಹೋಗಿದ್ರೆ, ದೇವರಾಜ್ ವೈಯಕ್ತಿಕ ಕೆಲಸಕ್ಕಾಗಿ ಬೆಳಗಾವಿಗೆ ಹೋಗಿದ್ದರು. ಹೀಗಾಗಿ ಈ ಇಬ್ಬರು ಘಟನೆಯಲ್ಲಿ ಬದುಕುಳಿದಿದ್ದಾರೆ.

ಬಿದ್ದ ಗೋಡೆ ನೋಡಲು ಹೋಗಿ ಪ್ರಾಣ ಕಳೆದುಕೊಂಡರು:

ಕಳೆದ ಎರಡು ದಿನಗಳಿಂದ ಬಡಾಲ ಅಂಕಲಗಿ ಗ್ರಾಮದಲ್ಲಿ ಬಿಟ್ಟು ಬಿಡದೇ ಮಳೆಯಾಗುತ್ತಿದೆ. ಮಳೆಯಿಂದ ಇಂದು ಸಂಜೆ ಖನಗಾಂವಿ ಕುಟುಂಬದ ದುರಸ್ತಿ ಹಂತದಲ್ಲಿದ್ದ ಒಂದು ಗೋಡೆ ಬಿದ್ದಿದೆ. ಮಳೆ ಸ್ವಲ್ಪ ಕಡಿಮೆ ಆಗುತ್ತಿದ್ದಂತೆ ಬಿದ್ದ ಗೋಡೆ ನೋಡು 6 ಜನರು ತೆರಳಿದ್ದಾರೆ. ಇವರ ಜೊತೆಗೆ ಎದುರು ಮನೆಯ ಕಾಶವ್ವ ಕೊಳೆಪ್ಪನವರ ಕೂಡ ತೆರಳಿದ್ದಾರೆ. ಬರುವಾಗ ಮನೆಯ ಪಕ್ಕದ ಗೋಡೆ ಕೂಡ ಧಾರಾಕಾರ ಮಳೆಗೆ ಕುಸಿದ ಪರಿಣಾಮ ಕೆಳಗಿದ್ದ 7 ಜನರು ಮೃತರಾಗಿದ್ದಾರೆ. ಐವರು ಸ್ಥಳದಲ್ಲೇ ಮೃತರಾಗಿದ್ದರೆ, ಇಬ್ಬರು ಆಸ್ಪತ್ರೆಯಲ್ಲಿ ಪ್ರಾಣಚೆಲ್ಲಿದ್ದಾರೆ.

ಸ್ಮಶಾನ ಮೌನ: ಸಿಎಂ ಸಾಂತ್ವನ

ನಾಡಹಬ್ಬ ದಸರಾಗೆ ಇಡೀ ಗ್ರಾಮ ಸಿದ್ಧತೆಯಲ್ಲಿ ತೊಡಗಿತ್ತು. ಗ್ರಾಮಸ್ಥರು ಅಮವಾಸ್ಯೆ ಕಳೆದು, ಹಬ್ಬಕ್ಕಾಗಿ ಸಿದ್ಧರಾಗುತ್ತಿದ್ದರು. ಆದರೆ ಮನೆ ಕುಸಿತದ ಕರಾಳ ಘಟನೆಯಿಂದ ಇಡೀ ಗ್ರಾಮದಲ್ಲಿ ಸ್ಮಶಾನ ಮೌನ ಆವರಿಸಿದೆ. ಘಟನೆಯ ಬಗ್ಗೆ ಪ್ರತಿಕ್ರಿಯೆ ನೀಡಿರುವ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ದಿಗ್ಭ್ರಮೆ ವ್ಯಕ್ತಪಡಿಸಿದ್ದಾರೆ. ಇನ್ನು ಬದುಕುಳಿದ ಭೀಮಪ್ಪ ಜೊತೆಗೆ ಫೋನ್ ಮೂಲಕ ಮಾತನಾಡಿರುವ ಸಿಎಂ ಬಸವರಾಜ್ ಬೊಮ್ಮಾಯಿ, ಕುಟುಂಬಕ್ಕೆ ಧೈರ್ಯ ತುಂಬಿದ್ದಾರೆ. ಅಲ್ಲದೇ ತಲಾ ಒಬ್ಬರಿಗೆ 5 ಲಕ್ಷ ಪರಿಹಾರ ಘೋಷಿಸಿದ್ದಾರೆ. ಕುಟುಂಬದ ಜೊತೆಗೆ ಸರ್ಕಾರ ಇದ್ದು, ದೃತಿಗೆಡದಂತೆ ಎಂದು ಧೈರ್ಯ ತುಂಬಿದ್ದಾರೆ.

ಸಾಮೂಹಿಕ ಅಂತ್ಯಕ್ರಿಯೆ

ಮಳೆಯಿಂದ ಗೋಡೆಯ ಕುಸಿತದ ಕಾರಣ ಒಂದೇ ಕುಟುಂಬದ 6 ಜನರು ಸೇರಿ 7 ಜನರು ಮೃತರಾಗಿದ್ದಾರೆ. ಸಾಮೂಹಿಕ ‌ಅಂತ್ಯಕ್ರಿಯೆಗೆ ಜಿಲ್ಲಾಡಳಿತ ಕೂಡ ಅಗತ್ಯ ಸಿದ್ಧತೆ ಮಾಡಿಕೊಂಡಿದೆ. ಗ್ರಾಮದ ಹೊರವಲಯದಲ್ಲಿ ಇಂದು ರಾತ್ರಿ ಸಾಮೂಹಿಕ ಅಂತ್ಯಕ್ರಿಯೆ ನಡೆಸಲಾಗುತ್ತಿದೆ.

ಖನಗಾಂವಿ ಕುಟುಂಬಸ್ಥರು ವಾಸವಿದ್ದ ತಗಡಿನ ಶೆಡ್​​ನಲ್ಲೇ ತಾಲೂಕು ವೈದ್ಯಾಧಿಕಾರಿ ಸಮ್ಮುಖದಲ್ಲಿ ಐವರ ಮರಣೋತ್ತರ ಪರೀಕ್ಷೆ ನಡೆಯುತ್ತಿದೆ. ಹಿರೇಬಾಗೇವಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಅರ್ಜುನ್ ಮತ್ತು ಲಕ್ಷ್ಮೀ ಮರಣೋತ್ತರ ಪರೀಕ್ಷೆ ಮಾಡಲಾಗುತ್ತಿದೆ. ಮರಣೋತ್ತರ ಪರೀಕ್ಷೆ ವೇಳೆಯೇ ಮತ್ತೊಂದು ಗೋಡೆ ಕುಸಿದು ಬಿದ್ದಿದೆ.

Last Updated : Oct 7, 2021, 5:01 AM IST

ABOUT THE AUTHOR

...view details