ಬೆಳಗಾವಿ:ಕನ್ನಡ ರಾಜ್ಯೋತ್ಸವ ಹಿನ್ನೆಲೆಯಲ್ಲಿ ಕುಂದಾನಗರಿ ಬೆಳಗಾವಿ ಮದುವಣಗಿತ್ತಿಯಂತೆ ಸಿಂಗಾರಗೊಂಡಿದೆ. ಇಲ್ಲಿನ ಚೆನ್ನಮ್ಮ ವೃತ್ತವನ್ನು ಹೂವು, ಬಾಳೆ ಗಿಡಗಳಿಂದ ಸಿಂಗರಿಸಲಾಗಿದೆ. ಪ್ರಮುಖ ಬೀದಿಗಳು ಕನ್ನಡ ಬಾವುಟ ಮತ್ತು ಹೂಗಳಿಂದ ಅಲಂಕಾರಗೊಂಡಿವೆ. ವಿದ್ಯಾರ್ಥಿಗಳು ಹಾಗು ಯುವಕರು ಚೆನ್ನಮ್ಮ ವೃತ್ತದ ಚೆನ್ನಮ್ಮ ಪುತ್ಥಳಿ ಎದುರು ಸೆಲ್ಫಿ ಕ್ಲಿಕ್ಕಿಸಿಕೊಂಡು ಸಂಭ್ರಮಿಸುತ್ತಿದ್ದಾರೆ.
ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅಕಾಲಿಕ ನಿಧನದ ಹಿನ್ನೆಲೆ ಈ ಬಾರಿ ಸರಳವಾಗಿ ಕನ್ನಡ ರಾಜ್ಯೋತ್ಸವ ಆಚರಿಸಲು ಕನ್ನಡ ಸಂಘಟನೆಗಳು ನಿರ್ಧರಿಸಿವೆ. ಅದ್ಧೂರಿ ರಾಜ್ಯೋತ್ಸವಕ್ಕೆ ಕಳೆದ 15 ದಿನಗಳಿಂದ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಸರ್ಕಾರ ಅನುಮತಿ ನೀಡದಿದ್ದರೂ ಅದ್ಧೂರಿ ರಾಜ್ಯೋತ್ಸವ ಮಾಡೇ ತಿರುತ್ತೇವೆ ಎಂದು ಕನ್ನಡ ಸಂಘಟನೆಗಳು ಪಟ್ಟು ಹಿಡಿದಿದ್ದರು. ಆದರೆ ಪುನೀತ್ ಅಕಾಲಿಕ ನಿಧನದ ಸೂತಕದ ಛಾಯೆ ಇಲ್ಲಿನ ಸಂಭ್ರಮವನ್ನು ಕಸಿದುಕೊಂಡಿದೆ.