ಬೆಳಗಾವಿ: 112 ಅಗತ್ಯ ಸೇವೆ ಜಾರಿಗಾಗಿ ರಾಜ್ಯ ಸರ್ಕಾರ 12,89,79,155 ರೂ. ವೆಚ್ಚ ಮಾಡಿರುವುದು ಆರ್ಟಿಐ ಮೂಲಕ ಬೆಳಕಿಗೆ ಬಂದಿದೆ. ನೇಮಕಾತಿ ಮೂಲಕ ಪೊಲೀಸ್ ಬಲ ಹೆಚ್ಚಿಸದೇ, ಮಾಶಾಸನ ಬಿಡುಗಡೆ ಮಾಡದೇ ಅನಗತ್ಯವಾಗಿ ಸರ್ಕಾರ ಸಾರ್ವಜನಿಕರ ತೆರಿಗೆ ಹಣ ವೆಚ್ಚ ಮಾಡುತ್ತಿರುವ ಬಗ್ಗೆ ಸಾರ್ವಜನಿಕ ವಲಯದಲ್ಲಿ ಅಸಮಾಧಾನ ವ್ಯಕ್ತವಾಗುತ್ತಿದೆ.
ಅಗತ್ಯ ಸೇವೆ ಜಾರಿಗೆ ಖರ್ಚು ಮಾಡಿರುವ ಹಣದ ಕುರಿತು ಮಾಹಿತಿ ನೀಡಿದ ಭೀಮಪ್ಪ ಗಡಾದ್ ಇನ್ನು 12,12,79,155 ರೂ.ಗಳಲ್ಲಿ ಮಹೇಂದ್ರ ಸ್ಕಾರ್ಪಿಯೋ ಎಸ್-5 ಮಾದರಿಯ 114 ವಾಹನ ಹಾಗೂ 70,28,898 ವೆಚ್ಚದಲ್ಲಿ 11 ಬಜಾಜ್ ಪಲ್ಸರ್ ಬೈಕ್ಗಳನ್ನು ಖರೀದಿಸಲಾಗಿದೆ ಎನ್ನಲಾಗಿದೆ. ಕೊರೊನಾದಿಂದ ದೇಶದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ.
ನಾಲ್ಕೈದು ತಿಂಗಳಿಂದ ಮಾಶಾಸನ ಹಣ ಸಹ ಬಿಡುಗಡೆಯಾಗಿಲ್ಲ. ಸರ್ಕಾರದ ವಿಳಂಬ ಧೋರಣೆಯಿಂದಾಗಿ ಫಲಾನುಭವಿಗಳ ಬದುಕು ತೀರಾ ಹದಗೆಟ್ಟಿದೆ. ಹೀಗಿರುವಾಗಲೂ ತುರ್ತು ಸೇವೆಗಾಗಿ ಇರುವ ಸಾರ್ವಜನಿಕರ ಹಣ ಪೋಲು ಮಾಡುವುದು ಎಷ್ಟು ಸರಿ.
ವಿಪರ್ಯಾಸ ಎಂದರೆ, ಅಗತ್ಯ ಸೇವೆಗಾಗಿ ಖರೀದಿಸಿದ ವಾಹನಗಳು ಮೂಲ ಉದ್ದೇಶಕ್ಕೆ ಬಳಕೆಯಾಗುತ್ತಿಲ್ಲ. ಬದಲಾಗಿ ಸಾರ್ವಜನಿಕ ವಾಹನ ತಪಾಸಣೆಗೆ ಬಳಸಲಾಗುತ್ತಿದೆ. ರಾಜ್ಯದಲ್ಲಿ 500 ಜನರಿಗೊಬ್ಬರು ಪೊಲೀಸ್ ಸಿಬ್ಬಂದಿ ಇರಬೇಕು ಎಂಬ ನಿಯಮವಿದೆ.
ಆದರೆ, ಇದುವರೆಗೆ ಯಾವ ಸರ್ಕಾರ ಕೂಡ ಪೊಲೀಸ್ ನೇಮಕಾತಿಗೆ ಕ್ರಮ ವಹಿಸಿಲ್ಲ. ಪರಿಣಾಮ 3 ಸಾವಿರ ಜನರಿಗೊಬ್ಬರು ಪೊಲೀಸ್ ಸಿಬ್ಬಂದಿಯಿದ್ದು, ಸಮಯಕ್ಕೆ ಸರಿಯಾಗಿ ಸಾರ್ವಜನಿಕರಿಗೆ ರಕ್ಷಣೆ ಸಿಗುತ್ತಿಲ್ಲ. ನೇಮಕಾತಿ ಬಗ್ಗೆ ಗಮನ ಹರಿಸದೇ ಸರ್ಕಾರ ಹಣ ಪೋಲು ಮಾಡುತ್ತಿದೆ ಎಂದು ಆರ್.ಟಿಐ ಕಾರ್ಯಕರ್ತ ಭೀಮಪ್ಪ ಗಡಾದ್ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.